ಬೆಂಗಳೂರು: ಕಾದ ಕುಲುಮೆಯಂತಿದ್ದ ರಾಜ್ಯ ರಾಜಕಾರಣ ತಣ್ಣಾಗಾಗಿದೆ. ಆದರೆ ಬಿಜೆಪಿಯಲ್ಲಿನ ರಾಜಕಾರಣ ಮಾತ್ರ ಇನ್ನು ಬೂದಿ ಮುಚ್ಚಿದ ಕೆಂಡ. ಅದಕ್ಕೆ ಕಾರಣ ಸಂಪುಟ ವಿಸ್ತರಣೆಗೆ ಹೈಕಮಾಂಡ್ ವಿಳಂಬ ಮಾಡ್ತಿರೋದು. ಬಿಎಸ್‍ವೈಗೆ ದೆಹಲಿ ಭೇಟಿಗೆ ಹೈಕಮಾಂಡ್ ಅವಕಾಶವನ್ನೇ ಕೊಡಲಿಲ್ಲ. ಜನವರಿ 17-18ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹುಬ್ಬಳ್ಳಿ ಪ್ರವಾಸ ಕೈಗೊಳ್ಳುತ್ತಿದ್ದು, ಅಲ್ಲಿಯೇ ಬಿಎಸ್‍ವೈ ಮಾತುಕತೆ ನಡೆಸಬೇಕಂತೆ. ಹಾಗಾಗಿ ಮತ್ತೆ ಸಚಿವ ಸಂಪುಟ ವಿಸ್ತರಣೆ ವಿಚಾರ ಕುತೂಹಲ ಮೂಡಿಸಿದೆ.
ಸಿಎಂ ಫಾರಿನ್ ಗೆ ಹೋಗುವ ಮೊದಲೋ? ಬಳಿಕವೋ? ಅನ್ನೋ ಚರ್ಚೆ ಬಿಜೆಪಿ ವಲಯದಲ್ಲಿ ಶುರುವಾಗಿದೆ. ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಟ್ಟರೆ ಜನವರಿ 19 ಭಾನುವಾರ ಬೆಳಗ್ಗೆ ಸಂಪುಟ ವಿಸ್ತರಣೆ ಖಚಿತ ಅಂತಾ ಯಡಿಯೂರಪ್ಪ ಮೂಲಗಳು ಹೇಳ್ತಿವೆ. ಇಲ್ಲದಿದ್ದರೆ ಸಿಎಂ ಯಡಿಯೂರಪ್ಪ ಫಾರಿನ್ ಪ್ರವಾಸದಿಂದ ಬಂದ ಬಳಿಕವೇ ಸಂಪುಟ ವಿಸ್ತರಣೆ ಸಾಧ್ಯತೆ ಹೆಚ್ಚಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ದಾವೋಸ್ ಗೆ ತೆರಳಲು ಯಡಿಯೂರಪ್ಪ ಮತ್ತೆ ಒಪ್ಪಿದ್ದಾರೆ. ಮೊನ್ನೆಯಷ್ಟೇ ನಾನು ಹೋಗಲ್ಲ ಅಂತಾ ಯಡಿಯೂರಪ್ಪ ಹೇಳಿದ್ದರು. ಆದರೆ ಈಗ ಸಿಎಂ ಬಿಎಸ್‍ವೈ ವಿದೇಶ ಪ್ರವಾಸಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಿಗದಿಯಂತೆ 20 ರಂದು ವಿದೇಶ ಪ್ರವಾಸಕ್ಕೆ ಹೊರಡಲಿದ್ದು, ಜನವರಿ 26ಕ್ಕೆ ವಾಪಸ್ ಆಗಲಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಮಧ್ಯಪ್ರದೇಶದ ಸಿಎಂ ಕಮಲನಾಥ್ ಮತ್ತು ಕರ್ನಾಟಕದ ಸಿಎಂ ಯಡಿಯೂರಪ್ಪನವರಿಗೆ ಮಾತ್ರ ಪಿಎಂ ಕಾರ್ಯಾಲಯದಿಂದ ಆಹ್ವಾನ ಬಂದಿದೆ. ಹಾಗಾಗಿ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಬ್ಬರೇ ಆಗಿರೋದ್ರಿಂದ ಹೈಕಮಾಂಡ್‍ನಿಂದಲೂ ಒತ್ತಡ ಇತ್ತು ಎನ್ನಲಾಗಿದೆ. ಅಂದಹಾಗೆ ಈ ಹಿಂದೆ ಚಳಿ ಕಾರಣ, ಕ್ಯಾಬಿನೆಟ್ ವಿಸ್ತರಣೆ, ಬಜೆಟ್ ನೆಪವೊಡ್ಡಿ ವಿದೇಶಕ್ಕೆ ಹೋಗಲ್ಲ ಅಂದಿದ್ದರು. ಆದ್ರೀಗ ಯಡಿಯೂರಪ್ಪ ದಿಢೀರ್ ಮನಸ್ಸು ಬದಲಿಸಿದ್ದಾರೆ.