ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಕಸರತ್ತು ಮುಂದುವರಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಗೆ ಮುಖ್ಯಮಂತ್ರಿಗಳು ನಿರಂತರವಾಗಿ ಪ್ರಯತ್ನ ಹಾಕುತ್ತಲೇ ಇದ್ದಾರೆ. ತಾವು ವಿದೇಶ ಪ್ರವಾಸಕ್ಕೆ ಹೋಗುವ ಮುನ್ನ ಶತಾಯಗತಾಯ ಸಂಪುಟ ವಿಸ್ತರಣೆ ಮುಗಿಸಿ ಹೋಗಬೇಕೆಂಬ ನಿಲುವಿನಲ್ಲಿ ಯಡಿಯೂರಪ್ಪ ಇದ್ದಾರೆ. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜೊತೆ ಮತ್ತೊಂದು ಭೇಟಿಗೆ ಸಿಎಂ ಯಡಿಯೂರಪ್ಪ ಸಮಯ ಕೇಳಿದ್ದಾರೆ. ಜನವರಿ 16 ರಂದು ಸಂಜೆ ದೆಹಲಿಯಲ್ಲಿ ಭೇಟಿಗೆ ಸಿಎಂ ಬಿಎಸ್‍ವೈ, ಅಮಿತ್ ಶಾ ಅವರ ಸಮಯ ಕೇಳಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
Advertisement
ಆದರೆ ಜನವರಿ 16 ರ ಭೇಟಿಗೆ ಅಮಿತ್ ಶಾ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಒಂದೊಮ್ಮೆ ಜನವರಿ 16 ರಂದು ಸಿಎಂ ಭೇಟಿಗೆ ಅಮಿತ್ ಶಾ ಒಪ್ಪಿದರೆ ಅಂದು ಮಧ್ಯಾಹ್ನವೇ ಸಿಎಂ ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ಭೇಟಿ ಮಾಡಿದರೆ ಮಾತ್ರ ಸಚಿವ ಸಂಪುಟ ವಿಸ್ತರಣೆ, ಸಂಪುಟಕ್ಕೆ ಯಾರ ಸೇರ್ಪಡೆ, ಯಾರನ್ನು ತೆಗೆಯಬಹುದೆಂದು ಸಾವಧಾನವಾಗಿ ಚರ್ಚೆ ಮಾಡಬಹುದು ಅನ್ನೋದು ಸಿಎಂ ಲೆಕ್ಕಾಚಾರ. ಒಂದು ವೇಳೆ ಜನವರಿ 16 ರಂದು ಸಿಎಂ ಭೇಟಿಗೆ ಅಮಿತ್ ಶಾ ಒಪ್ಪದಿದ್ದರೆ ಜನವರಿ 18 ರಂದೇ ಹುಬ್ಬಳ್ಳಿಯಲ್ಲಿ ಭೇಟಿ ಮಾಡಬೇಕಾಗುತ್ತದೆ. ಹುಬ್ಬಳ್ಳಿಗಿಂತ ದೆಹಲಿಯಲ್ಲೇ ಅಮಿತ್ ಶಾ ಭೇಟಿಗೆ ಸಿಎಂ ಒಲವು ತಾಳಿರುವುದರಿಂದ ಜನವರಿ 16 ರಂದು ಭೇಟಿಗೆ ಸಮಯ ಕೇಳಿದ್ದಾರೆ ಎನ್ನಲಾಗಿದೆ.
Advertisement
Advertisement
ಜನವರಿ 16 ಭೇಟಿ ಫಲಪ್ರದವಾದರೆ ದಾವೋಸ್ ಗೆ ಹೋಗುವ ಮುನ್ನ ಅಂದರೆ ಜನವರಿ 17 ಅಥವಾ 19 ರಂದು ಸಂಪುಟ ವಿಸ್ತರಣೆ ಮುಗಿಸಲೇಬೇಕೆಂಬ ಧಾವಂತದಲ್ಲಿ ಸಿಎಂ ಯಡಿಯೂರಪ್ಪ ಇದ್ದಾರೆ ಎನ್ನಲಾಗಿದೆ. ಆದರೆ ಜನವರಿ 16ರಂದು ಸಿಎಂ ಜೊತೆಗೆ ಭೇಟಿಗೆ ಅಮಿತ್ ಶಾ ಒಕೆ ಅಂತಾರಾ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಅಮಿತ್ ಶಾ ಒಪ್ಪಿಗೆ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.