ಬೆಂಗಳೂರು: ಕನಸುಗಳನ್ನ ಹೊತ್ತು ರಾಜಧಾನಿ ಬೆಂಗಳೂರಿಗೆ ಬಂದು ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದವ ನಡುರಸ್ತೆಯಲ್ಲಿ ಕೊಲೆಯಾದವನ ದುರಂತ ಕಥೆ.
ಹಾಸನ ಜಿಲ್ಲೆಯ ಅರಸೀಕೆರೆಯ ನಿವಾಸಿ ಮೋಹನ್ ಕೊಲೆಯಾದ ಚಾಲಕ. ಕ್ಯಾಬ್ ಚಾಲಕನಾಗಿದ್ದ ಮೋಹನ್ ಜಾಲಹಳ್ಳಿ ಬಳಿ ರೂಮ್ ಮಾಡಿಕೊಂಡಿದ್ದರು. ಆಗಾಗ ನಾಗವಾರ ಪಾಳ್ಯದ ಬಳಿ ಇರುವ ಸ್ನೇಹಿತನ ರೂಮ್‍ಗೆ ಹೋಗಿ ಅಲ್ಲೆ ಊಟ ಮಾಡಿ ಉಳಿದುಕೊಳ್ಳುತ್ತಿದ್ದರು.
ಕಾರನ್ನ ರೂಮ್ ಹತ್ತಿರ ಪಾರ್ಕ್ ಮಾಡಿದ್ದ ಮೋಹನ್ ಸ್ನೇಹಿತನ ಜೊತೆ ಊಟಕ್ಕೆಂದು ನಾಗವಾರ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಎರಡು ಬೈಕುಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಇಬ್ಬರ ಬಳಿ ಹಣ ಕೇಳಿದ್ದಾರೆ. ಆದ್ರೆ ಇಲ್ಲವೆಂದಾಗ ಮೋಹನನಿಗೆ ಚಾಕು ಇರಿದಿದ್ದಾರೆ. ಆಗ ಜೊತೆಗಿದ್ದ ಸ್ನೇಹಿತ ಓಡಿ ಹೋಗಿದ್ದಾನೆ. ಹೊಟ್ಟೆ ಮತ್ತು ತಲೆಗೆ ತೀವ್ರ ಗಾಯವಾಗಿದ್ದರಿಂದ ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ಮೋಹನ ಮೃತಪಟ್ಟಿದ್ದಾರೆ.
ಬೆಂಗಳೂರಿನ ಹೊರವಲಯದ ನೆಲಮಂಗಲದಲ್ಲಿಯೂ 2 ಬೈಕ್‍ಗಳಲ್ಲಿ ಬಂದ ಐವರು ದುಷ್ಕರ್ಮಿಗಳ ತಂಡ ಹಣ್ಣಿನ ವ್ಯಾಪಾರಿಗೆ ಲಾಂಗ್ ತೋರಿಸಿ 45 ಸಾವಿರ ರೂಪಾಯಿ ನಗದು ಮತ್ತು 2 ಮೊಬೈಲ್ ದೋಚಿದ್ದಾರೆ. ದರೋಡೆಕೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕೃತ್ಯಗಳನ್ನೆಲ್ಲ ನೋಡಿದಾಗ ಸಿಲಿಕಾನ್ ಸಿಟಿ ಎಷ್ಟು ಸೇಫ್ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv