ರಾಮನಗರ: ಕಸ್ಟಮರ್ ಡ್ರಾಪ್ ಮಾಡಿ ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಕ್ಯಾಬ್ ಚಾಲಕನೊಬ್ಬ (Cab Driver) ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾವರೆಕೆರೆ (Tavarekere) ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಪ್ಪ ಸರ್ಕಲ್ ಬಳಿ ನಡೆದಿದೆ.
ಬೆಂಗಳೂರಿನ ಕೆ.ಪಿ.ಅಗ್ರಹಾರ ಮೂಲದ ಪುಷ್ಟರಾಜ್ (29) ಮೃತಪಟ್ಟ ಕ್ಯಾಬ್ ಚಾಲಕ. ಪುಷ್ಪರಾಜ್ ಗ್ರಾಹಕರನ್ನು ತಾವರೆಕೆರೆ ವ್ಯಾಪ್ತಿಗೆ ಡ್ರಾಪ್ ಮಾಡಿದ ನಂತರ, ಚಂದ್ರಪ್ಪ ಸರ್ಕಲ್ ಸಮೀಪದ ಲೇಔಟ್ ಒಂದರಲ್ಲಿ ಕಾರು ಪಾರ್ಕ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ. ಆದರೆ ಬೆಳಿಗ್ಗೆಯಿಂದಲೂ ಕಾರು ಒಂದೇ ಸ್ಥಳದಲ್ಲಿ ನಿಂತಿರುವುದನ್ನು ಕಂಡ ಸ್ಥಳೀಯರು ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾರಿನೊಳಗೆ ಚಾಲಕ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚುನಾವಣಾ ಆಯೋಗ ನಾವು ಕೊಟ್ಟ ದೂರಿನ ಅನ್ವಯ FIR ಹಾಕಬೇಕು: ಪರಮೇಶ್ವರ್
ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕಾರಿಗೆ ಟ್ರಕ್ ಡಿಕ್ಕಿ – ತೆಲಂಗಾಣ ಮೂಲದ ಮಹಿಳೆ ಸಾವು

