ಚಿಕ್ಕಮಗಳೂರು: ತುಕುಡೆ ಗ್ಯಾಂಗಿನ ನಾಯಕರ ತಾತ, ಮುತ್ತಾತಂದಿರು ಈ ರೀತಿ ಹೇಳಿ ಮಣ್ಣಾಗಿದ್ದಾರೆ. ಅವರ ಮಣ್ಣಿನ ಮೇಲೆ ಬಿಜೆಪಿ ಹಾಗೂ ಸಂಘ ಬಲವಾಗಿ ಬೆಳೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಕನ್ಹಯ್ಯ ಕುಮಾರ್ ಬಿಜೆಪಿಯನ್ನು ತುಕ್ಡೆ-ತುಕ್ಡೆ ಮಾಡುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇವರ ತಾತ, ಮುತ್ತಾತರು ಇದೇ ಮಾತು ಹೇಳಿ ಕಳೆದು ಹೋಗಿದ್ದಾರೆ. ಆದರೂ ನಮ್ಮ ಸಂಘ, ಭಾರತೀಯ ಜನತಾ ಪಾರ್ಟಿ ಬಲವಾಗಿ ಬೆಳೆಯುತ್ತಲೇ ಬಂದಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ
ಕನ್ಹಯ್ಯ ಕುಮಾರ್, ತುಕ್ಡೆ ಗ್ಯಾಂಗಿನ ಒಬ್ಬ ನಾಯಕ. ಹಿಟ್ಟು ಹಳಸಿತ್ತು, ಡ್ಯಾಷ್ ಕಾದಿತ್ತು ಎಂಬ ಗಾದೆ ಮಾತಿದೆ. ಇವತ್ತು ಕಾಂಗ್ರೆಸ್ ಪರಿಸ್ಥಿತಿ ಅದೇ ಆಗಿದೆ. ಕಾಂಗ್ರೆಸ್ ಒಂದರ ಹಿಂದೆ ಒಂದು ಚುನಾವಣೆಯಲ್ಲಿ ಸೋಲುತ್ತಿದೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲದ ಪಕ್ಷ, ದೇಶಕ್ಕೆ ಏನು ಪ್ರಜಾಪ್ರಭುತ್ವದ ಪಾಠ ಮಾಡುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಯಾವ ಪಕ್ಷ ಆಂತರಿಕ ಪ್ರಜಾಪ್ರಭುತ್ವ ಹೊಂದಿರುತ್ತೋ ಅವರಿಗೆ ಮಾತ್ರ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇರುತ್ತೆ. ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ? ಅಲ್ಲಿರುವುದು ವಂಶ ಪಾರಂಪರ್ಯ ಪರಿವಾರ ವಾದ. ಒಮ್ಮೆ ಪರಿವಾರ ವಾದ ಬಂದರೆ ಅಲ್ಲಿ ಮಾಲೀಕತ್ವ ಬರುತ್ತೆ. ಇಲ್ಲಿ ಮಾಲೀಕರು ಮತ್ತು ನೌಕರರು ಇರುತ್ತಾರೆ. ಮಾಲೀಕರು ಮತ್ತು ಗುಲಾಮರು ಇರುತ್ತಾರೆ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಡುಗೆ ಎಣ್ಣೆ ಇನ್ನಷ್ಟು ದುಬಾರಿ
ತುಕುಡೆ ಗ್ಯಾಂಗಿನ ನಾಯಕರಿಗೆ ಗತಿ ಇರಲಿಲ್ಲ. ಚುನಾವಣೆಯಲ್ಲಿ ಸೋತರು, ಮೊದಲು ಕಮ್ಯುನಿಸ್ಟ್ ಪಾರ್ಟಿ ಎಂದು ಇಟ್ಟುಕೊಂಡರು. ಅಲ್ಲಿ ವಿಫಲರಾದರು, ಚುನಾವಣೆಯಲ್ಲಿ ಸೋತರು. ಸೋತ ಮೇಲೆ ಕಾಂಗ್ರೆಸ್ ಗೆ ಹೋಗಿ ಸೇರಿದ್ದಾರೆ. ಇವರ ತಾತ, ಮುತ್ತಾತರು ಈ ರೀತಿ ಮಾತನಾಡಿ ಮಣ್ಣಾಗಿದ್ದಾರೆ. ಭಾರತೀಯ ಜನತಾ ಪಾರ್ಟಿ, ಆರ್.ಎಸ್.ಎಸ್. ಅವರ ಮಣ್ಣಿನ ಮೇಲೆ ಬಲವಾಗಿ ಬೆಳೆದಿದೆ ಎಂದರು.
ಇದೇ ವೇಳೆ ಮತಾಂತರದ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ ಅವರು, ಮತಾಂತರ ದೇಶಾಂತರಕ್ಕೆ ಸಮ. ಮತಾಂತರಿಯಾದವನು ತನ್ನ ಸಂಸ್ಕøತಿಯನ್ನು ಬದಲಿಸುತ್ತಾನೆ. ಮುಂದಿನ ದಿನಗಳಲ್ಲಿ ದೇಶಾಂತರದ ಬಗ್ಗೆ ಯೋಚನೆ ಮಾಡುತ್ತಾನೆ. ಎಲ್ಲಿ ಮತಾಂತರದ ಹಾವಳಿ ಜಾಸ್ತಿ ಆಗಿದೆಯೋ, ಅಲ್ಲಿ ನಾವು ಭಾರತೀಯರಲ್ಲ ಎಂಬ ಮನೋಭಾವನೆ ಬೆಳೆಯುತ್ತೆ ಅನ್ನೋದು ಗಾಂಧಿಜೀಯವರ ಮಾತು. ಗಾಂಧಿಜೀಯೇ ಹಾಗೇ ಹೇಳಿದ್ದರು ಅಂದರೆ ಅವರು ಅಪಾಯವನ್ನು ಗ್ರಹಿಸಿದ್ದರು ಎಂದರ್ಥ ಎಂದರು.
ಮತಾಂತರ ಇಂದು ಹಲವು ರೀತಿಯಲ್ಲಿ ನಡೆಯುತ್ತಿದೆ. ಹಣ, ಆರೋಗ್ಯದ ದುರ್ಬಲತೆ, ಅಸಹಾಯಕತೆ ಹಾಗೂ ಹೆಣ್ಣನ್ನು ತೋರಿಸಿ ಮತಾಂತರ ನಡೆಯುತ್ತಿದೆ. ಈ ಬಗ್ಗೆ ಸಮಾಜ ಯೋಚನೆ ಮಾಡಬೇಕು. ಸರ್ಕಾರ ಏನು ನಿರ್ಣಯ ತೆಗೆದುಕೊಳ್ಳುತ್ತೋ ಕಾದು ನೋಡುತ್ತಿದ್ದೇವೆ. ಮತಾಂತರ ನಿಷೇಧಕ್ಕೆ ಕಠಿಣ ಕ್ರಮ ಕೈಗೊಂಡರೆ ನಮ್ಮ ಸ್ವಾತಗವಿದೆ ಎಂದರು