ಕಾಂಗ್ರೆಸ್‍ನದ್ದು ಹುಳಿ ಹಿಂಡುವ ರಾಜಕಾರಣ: ಸಚಿವ ಸಿ.ಸಿ.ಪಾಟೀಲ್‌ ಟೀಕೆ

Public TV
2 Min Read
cc patil

ಬೆಂಗಳೂರು: ರಾಜ್ಯದಲ್ಲಿ ಬಿಟ್‌ ಕಾಯಿನ್‌ ಹಗರಣ ಭಾರಿ ಸದ್ದು ಮಾಡುತ್ತಿದೆ. ರಾಜಕೀಯ ಪಕ್ಷಗಳು ಪರಸ್ಪರ ಹಗರಣದ ಆರೋಪಗಳನ್ನು ಹೊರಿಸುತ್ತಿವೆ. ಹಗರಣದಲ್ಲಿ ಬಿಜೆಪಿ ಕೈವಾಡವಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿರುವ ಬೆನ್ನಲ್ಲೇ, ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಆರೋಪವನ್ನು ತಳ್ಳಿಹಾಕಿರುವ ಸಚಿವ ಸಿ.ಸಿ.ಪಾಟೀಲ್‌ ಅವರು, ಕಾಂಗ್ರೆಸ್‌ನದ್ದು ಹುಳಿ ಹಿಂಡುವ ರಾಜಕಾರಣ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಜನಪರವಾದ ಆಡಳಿತವನ್ನು ನೀಡುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಶಸ್ವಿಯಾಗಿ ಶತದಿನಗಳನ್ನು ಪೂರೈಸಿದ್ದಾರೆ. ಅವರ ಆಡಳಿತದ ಕಾರ್ಯಸಾಧನೆಯನ್ನು ಕಂಡು ಹತಾಶರಾಗಿ ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ ಹೆಸರಿನಲ್ಲಿ ವಿನಾಕಾರಣ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಲು ಹವಣಿಸುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕುಟುಂಬ ರಾಜಕಾರಣದಲ್ಲಿ ಬಿಜೆಪಿ ದೇಶದಲ್ಲೇ ದಾಖಲೆ – ಬಿಜೆಪಿ ವಿರುದ್ದ ಜೆಡಿಎಸ್ ಟ್ವೀಟ್

Bitcoin

ಬಿಟ್ ಕಾಯಿನ್ ವಿಚಾರದಲ್ಲಿ ವಿವಾದ ಸೃಷ್ಟಿಸಿ ಅದರಿಂದ ರಾಜಕೀಯ ದುರ್ಲಾಭ ಪಡೆದುಕೊಳ್ಳಬಹುದು ಎಂಬ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಮುಖಂಡರಿಗೆ, ಇದೇ ಬಿಟ್ ಕಾಯಿನ್ ತಿರುಗುಬಾಣವಾಗಿ ಮುಳುವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸಾಬೀತಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ನಾಯಕರೇ ತಮಗೆ ಬಿಟ್ ಕಾಯಿನ್ ಹಗರಣದ ಮಾಹಿತಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‍ನ ಮುಖಂಡರೊಬ್ಬರು ಹೇಳುವ ಮೂಲಕ ಈ ತನಿಖೆಯ ಹಾದಿ ತಪ್ಪಿಸಲು ಮತ್ತು ಬಿಜೆಪಿಯಲ್ಲಿ ಹುಳಿ ಹಿಂಡಿ ಒಡಕು ಸೃಷ್ಟಿಸಲು ಹವಣಿಸಿರುವುದು ಸ್ಪಷ್ಟವಾಗಿದೆ. ಆದರೆ ಇಂತಹ ಹುನ್ನಾರಗಳ ಆಟ ನಡೆಯುವುದಿಲ್ಲ. ಬಿಜೆಪಿಯಲ್ಲಿ ಆಂತರಿಕ ಒಗ್ಗಟ್ಟು ಗಟ್ಟಿಯಾಗಿದೆ. ಕಾಂಗ್ರೆಸ್‍ನ ಹಾಗೆ “ಒಂದು ಮನೆ ಹಲವು ಬಾಗಿಲು” ಎಂಬಂಥ ಪರಿಸ್ಥಿತಿ ನಮ್ಮಲ್ಲಿಲ್ಲ ಎಂದು ಸಚಿವರು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ – ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು

BJP - CONGRESS

ಬಿಟ್ ಕಾಯಿನ್ ಹಗರಣ ಈಗಾಗಲೇ ಕೆಲವು ಕಾಂಗ್ರೆಸ್ ಮುಖಂಡರ ಕಾಲಿಗೆ ಸುತ್ತಿಕೊಂಡಿರುವುದು ಬಹಿರಂಗವಾಗಿದ್ದರೂ, ತಾವೇ ಸ್ವತಃ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ದುಸ್ಸಾಹಸಕ್ಕೆ ಕಾಂಗ್ರೆಸ್ ಮುಖಂಡರು ಇಳಿಯುತ್ತಿರುವ ವರ್ತನೆ ನಿಜಕ್ಕೂ ವಿಚಿತ್ರವಾಗಿದೆ ಗರಂ ಆಗಿದ್ದಾರೆ.

ಬಿಟ್ ಕಾಯಿನ್ ಹಗರಣದ ಬಗ್ಗೆ ಸೂಕ್ತ ತನಿಖೆ ಮಾಡಿದ್ದು ಮತ್ತು ಇಡಿ ಹಾಗೂ ಸಿಬಿಐಗೆ ಶಿಫಾರಸು ಮಾಡಿದ್ದೆ ನಮ್ಮ ಸರ್ಕಾರ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಸ್ವತಃ ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ. ಅದರಂತೆ ಈಗ ತನಿಖೆ ಸರಿಯಾದ ದಿಕ್ಕಿನಲ್ಲಿಯೇ ನಡೆಯುತ್ತಿರುವುದರಿಂದ ಯಾರೂ ಕಪೋಲಕಲ್ಪಿತವಾಗಿ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *