ಬೆಂಗಳೂರು: ನಾನು ಶ್ರೀರಾಮನ ಭಕ್ತ, ಶ್ರೀರಾಮ ನಮ್ಮ ಮನೆ ದೇವರು. ನಾನು ಮುಡಾದಿಂದ (MUDA) ದಾಖಲೆ ತೆಗೆದುಕೊಂಡಿದ್ದೇನೆ ಎಂದು ಶ್ರೀರಾಮನ ಮೇಲೆ ಬಂದು ಪ್ರಮಾಣ ಮಾಡಲಿ ಎಂದು ಮೈಸೂರಿನ ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಬೈರತ್ತಿ ಸುರೇಶ್ (Byrathi Suresh) ಸವಾಲ್ ಹಾಕಿದ್ದಾರೆ.
ಕರ್ನಾಟಕದ (Karnataka) ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಉಪಚುನಾವಣೆ, ಜಾತಿ ಜನಗಣತಿ, ಮೀಸಲಾತಿ ವಿಚಾರ ಸೇರಿ ಹಲವು ವಿಷಯಗಳ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಕಾವೇರಿ ನಿವಾಸದಲ್ಲಿ ಸಭೆ ನಡೆಸಲಾಗುತ್ತಿದೆ. ಸಭೆಗೆ ಸಚಿವರಾದ ಡಿ.ಕೆ.ಶಿವಕುಮಾರ್ (DK Shivakumar), ಬೈರತಿ ಸುರೇಶ್, ಪ್ರೀಯಾಂಕ್ ಖರ್ಗೆ, ಜಮೀರ್ ಅಹಮದ್, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್, ಎಂ.ಸಿ ಸುಧಾಕರ್, ದಿನೇಶ್ ಗುಂಡೂರಾವ್, ಎಸ್.ಎಸ್ ಮಲ್ಲಿಕಾರ್ಜುನ್, ಚಲುವರಾಯಸ್ವಾಮಿ, ರಾಮಲಿಂಗಾ ರೆಡ್ಡಿ ಸೇರಿ ಹಲವರು ಪಾಲ್ಗೊಂಡಿದ್ದಾರೆ.
ಸಭೆಗೂ ಮುನ್ನ ಮುಡಾ ದಾಖಲೆಗಳ ಸಾಗಣೆ ಆರೋಪ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬೈರತಿ ಸುರೇಶ್, ಬಿಜೆಪಿ ಶಾಸಕರ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಮೀಸಲು ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ತಡೆ – ಅರಸೀಕೆರೆ ಕೆರೆಗಳಿಗೆ ಹರಿಯದ ನೀರು
ಮುಡಾಕ್ಕೆ ಸಂಬಂಧಪಟ್ಟ ಒಂದೇ ಒಂದು ದಾಖಲೆಯನ್ನೂ ನಾನು ತಗೆದುಕೊಂಡು ಹೋಗಿಲ್ಲ. ನಾನು ಈ ವಿಚಾರವಾಗಿ ಮೈಸೂರು ಶಾಸಕ ಶ್ರೀವತ್ಸ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಅಣೆ ಮಾಡಲು ಸವಾಲು ಹಾಕುತ್ತೇನೆ. ಚಾಮುಂಡಿ ಬೆಟ್ಟ, ಧರ್ಮಸ್ಥಳಕ್ಕೆ ಬಂದು ಅಣೆ ಮಾಡಲಿ ನಾನೂ ಮಾಡುತ್ತೇನೆ. ಶಾಸಕ ಶ್ರೀವತ್ಸ, ಶೋಭಾ ಕರಂದ್ಲಾಜೆ ಅವರು ಮೊದಲು ಸುಳ್ಳು ಹೇಳುವುನ್ನು ಬಿಡಲಿ ಎಂದು ಕಿಡಿ ಕಾರಿದರು.
ಮೈಸೂರಿನ ಬಿಜೆಪಿ ಶಾಸಕರು ಬಾಯಿಬಿಟ್ಟರೆ ಸುಳ್ಳು ಹೇಳ್ತಾರೆ. ಶ್ರೀವತ್ಸ ಅವರು ಪೂಜೆ ಮುಗಿಸಿಕೊಂಡು, ಹಣೆಗೆ ನಾಮ ಹಾಕಿಕೊಂಡು ಬಂದು ಸುಳ್ಳು ಹೇಳ್ತಾರೆ. ನಾನು ಶ್ರೀರಾಮನ ಭಕ್ತ, ಶ್ರೀರಾಮ ನಮ್ಮ ಮನೆ ದೇವರು, ಬಂದು ಅಣೆ ಮಾಡಲಿ ನಾನು ಮುಡಾ ದಾಖಲೆ ತಂದಿದ್ದೇನೆ ಅಂತ ಬಂದು ಆಣೆ ಮಾಡಲಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ವಾರಣಾಸಿಯಲ್ಲಿ 6,700 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ
ಇದೇ ವೇಳೆ ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಹಾಗಾಗಿ ಎಲ್ಲಾ ಸಚಿವರ ಜೊತೆ ಸಿಎಂ ಸಭೆ ಇದೆ. ಮೂರು ಕ್ಷೇತ್ರಗಳಲ್ಲಿ ಗೆಲ್ಲಬೇಕು ಆ ಕಾರಣಕ್ಕೆ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಸಭೆ ನಡೆಯುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ಲೋರೇಟ್, ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಿ CRPF ಶಾಲೆ ಬಳಿ ಸ್ಫೋಟ – NIA ತೀವ್ರ ಶೋಧ