ಬೆಂಗಳೂರು: ಮೈತ್ರಿ ಸರ್ಕಾರ ಉರುಳಿಸಲು ರಾಜೀನಾಮೆ ನೀಡಿದ್ದ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣಾ ಪ್ರಚಾರ ಬಿರುಸು ಪಡೆದಿದ್ದು, ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹಾಗೂ ಶಾಸಕ ಭೈರತಿ ಸುರೇಶ್ ಅವರ ನಡುವಿನ ವಾಗ್ದಾಳಿ ಜೋರಾಗಿದೆ. ಇಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಭೈರತಿ ಸುರೇಶ್ ಅವರು ಬಹಿರಂಗ ಸವಾಲು ಹಾಕಿದ್ದು, ಮುಸ್ಲಿಂರ ಸಮುದಾಯದ 300 ಮತಗಳನ್ನು ಎಂಟಿಬಿ ಪಡೆದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.
ಹೊಸಕೋಟೆಯ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸುರೇಶ್ ಅವರು, ಎದುರಾಳಿ ಬಿಜೆಪಿ ಪಕ್ಷ ಹಾಗೂ ಎಂಟಿಬಿ ನಾಗರಾಜ್ ಅವರ ವಿರುದ್ಧ ವಾಗ್ದಾಳಿಯನ್ನು ನಡೆಸಿದರು. ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಬುದ್ಧ ಜಯಂತಿ ನಿಲ್ಲಿಸಿದ್ದರು. ಈಗ ಟಿಪ್ಪುಸುಲ್ತಾನ್ ಬಗ್ಗೆ ಪಠ್ಯವೇ ಇರದಂತೆ ಮಾಡುತ್ತಿದ್ದಾರೆ. ಆದ್ದರಿಂದ ಕೋಮುವಾದಿ ಪಕ್ಷವನ್ನು ಅಲ್ಪ ಸಂಖ್ಯಾತರು, ದಲಿತ ಸಮುದಾಯಗಳು ಬೆಂಬಲಿಸಬಾರದು ಎಂದು ಕರೆ ನೀಡಿದರು.
Advertisement
Advertisement
ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿರುವ ಎಂಟಿಬಿ ಅವರು ನಾವು ಕಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಅವರು ಬಂದಿದ್ದಾರೆ ಎಂದಿದ್ದಾರೆ. ಆದರೆ ಈಗ ಬಿಜೆಪಿಗೆ ಹೋಗಲು ಸಿದ್ಧವಾಗಿರುವ ಎಂಟಿಬಿ ಅವರು ಆ ಪಕ್ಷವನ್ನು ಕಟ್ಟಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಕ್ಷೇತ್ರದಲ್ಲಿ ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಆದರೆ ಹೊಸಕೋಟೆ ಜನ ಸ್ವಾಭಿಮಾನಿಗಳಾಗಿದ್ದಾರೆ ಎಂದರು.
Advertisement
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರು, ಈ ಬಾರಿಯ ಉಪಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯ ಭವಿಷ್ಯದ ದಿಕ್ಸೂಚಿಯಾಗಿದ್ದು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನಾವು ಮಾಡುವ ಕೆಲಸ ಪ್ರಮುಖವಾಗಿದೆ. ಸಮ್ಮಿಶ್ರ ಸರ್ಕಾರವಿದ್ದಾಗ ನಮ್ಮ ಸರ್ಕಾರ ತೆಗೆಯ ಬೇಕು ಎಂದು ಅನಗತ್ಯ ಚಳುವಳಿ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಎಲ್ಲಾ ವಿಚಾರಗಳಲ್ಲೂ ವೈಫಲ್ಯವಾಗಿದ್ದು, ಬಿಎಸ್‌ವೈ ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ಸಹಕಾರ ನೀಡುತ್ತಿಲ್ಲ. ಅವರನ್ನು ಸುಮ್ಮನೆ ಸಿಎಂ ಮಾಡಿದ್ದಾರೆ. ಸಿಎಂಗೆ ಅವರ ಪಕ್ಷದ ನಾಯಕರೇ ಸಹಕಾರ ನೀಡದಿದ್ದರೆ ಉತ್ತಮ ಆಡಳಿತ ನೀಡಲು ಹೇಗೆ ಸಾಧ್ಯ ಎಂದರು.