ಶ್ರೀನಗರ: ದೇಶಾದ್ಯಂತ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯುತ್ತಿದೆ. ಕೆಲ ಸಣ್ಣ ಪುಟ್ಟ ಅಹಿತಕರ ಘಟನೆ ಹೊರತುಪಡಿಸಿ, ಬಹುತೇಕ ಎಲ್ಲಾ ಕಡೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.
ಶ್ರೀನಗರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯ ವೇಳೆ ಗಡಿಭದ್ರತಾ ಯೋಧರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯ ವೇಳೆ ಮೂವರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕೇಂದ್ರ ಕಾಶ್ಮೀರದ ಬುದ್ಗಾಮ್ ಮತ್ತು ಗಂದರ್ಬಲ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಮತಗಟ್ಟೆಗೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಗಡಿ ಭದ್ರತಾ ಯೋಧರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಬುದ್ಗಾಮ್ ನ ಚರಾರ್-ಇ- ಷರೀಫ್ ಬಳಿಯ ಪಕೇರ್ಪೋರಾ ಮತಗಟ್ಟೆ ಬಳಿ 100ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಡಿ ಭದ್ರತಾ ಪಡೆ ಯೋಧರ ಮೇಲೆ ಕಲ್ಲುಗಳನ್ನು ತೂರಿದ್ದು ಈ ಹಿನ್ನೆಲೆಯಲ್ಲಿ ಯೋಧರು ಪ್ರತಿಭಟನಾಕಾರರನ್ನು ಚದುರಿಸಲು ಗುಂಡು ಹಾರಿಸಿದ್ದು ಇದರಲ್ಲಿ ಇಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.
Advertisement
Advertisement
ಮೊದಲ ಪ್ರತಿಭಟನಾಕಾರರಿಗೆ ಸ್ಥಳದಿಂದ ತೆರಳುವಂತೆ ಯೋಧರು ಸೂಚನೆ ನೀಡಿದರು. ಆದ್ರೆ ಇದನ್ನು ಗಣನೆಗೆ ತೆಗೆದುಕೊಳ್ಳದೆ ಯೋಧರ ವಿರುದ್ಧ ಕಲ್ಲುಗಳನ್ನು ತೂರಿದ್ದರಿಂದ ಯೋಧರು ಪ್ರತಿದಾಳಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಿಂದ ಇಬ್ಬರು ಮೃತಪಟ್ಟಿದ್ದು, ಮೃತರನ್ನು 20 ವರ್ಷದ ಮೊಹಮ್ಮದ್ ಅಬ್ಬಾಸ್ ಮತ್ತು 15 ವರ್ಷದ ಫೈಜಾನ್ ಅಹಮದ್ ಎಂದು ಗುರುತಿಸಲಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಇನ್ನೊಂದೆಡೆ ಬಿರ್ವಾ ಪ್ರದೇಶದಲ್ಲಿ ಕಲ್ಲು ತೂರಾಟ ನಡೆಸಿದವರ ಮೇಲೆ ಯೋಧರು ಗುಂಡಿನ ದಾಳಿ ನಡೆಸಿದ್ದು, ಅಲ್ಲಿ ನಿಸ್ಸಾರ್ ಅಹಮ್ಮದ್ ಎಂಬಾತ ಮೃತಪಟ್ಟಿದ್ದಾನೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.
Advertisement
ಮತದಾನದ ಹಿನ್ನೆಲೆಯಲ್ಲಿ ಶ್ರೀನಗರ, ಬುದ್ಗಾಮ್ ಮತ್ತು ಗುಂದರ್ಬಲ್ ಈ ಮೂರು ಜಿಲ್ಲೆಗಳಿಗೆ ರಜೆ ಘೋಷಿಸಲಾಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಅಸ್ಸಾಂ, ಕರ್ನಾಟಕ, ರಾಜಸ್ಥಾನ ದೆಹಲಿ, ಪಶ್ಚಿಮ ಬಂಗಾಳ ಮೊದಲಾದ ಕಡೆಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ.