ಸಿಂಗಾಪುರ: ಬೈಜುಸ್ (Byju’s) ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್(Byju Raveendran) ಅವರಿಗೆ ಸಿಂಗಾಪುರ ನ್ಯಾಯಾಲಯವು (Singapore Court) 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ (QIA) ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್ (Qatar Holding LLC) ಒಪ್ಪಂದ ಉಲ್ಲಂಘನೆ ಮತ್ತು ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಪ್ರಕಟವಾಗಿದೆ. ಆಸ್ತಿ ವಿವರಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 2024 ರಿಂದ ನ್ಯಾಯಾಲಯ ನೀಡಿದ್ದ ಹಲವು ಆದೇಶಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇವರಿಗೆ ಶಿಕ್ಷೆ ವಿಧಿಸಲಾಗಿದೆ.
ರವೀಂದ್ರನ್ ಅವರು ಯಾವುದೇ ನೆಪ ಹೇಳದೆ ತಕ್ಷಣವೇ ಸಿಂಗಾಪುರದ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಕೋರ್ಟ್ ಖಡಕ್ ಆಗಿ ಸೂಚಿಸಿದೆ. ಕಾನೂನು ವೆಚ್ಚಗಳಿಗಾಗಿ ಸುಮಾರು 90 ಸಾವಿರ ಸಿಂಗಾಪುರ ಡಾಲರ್(67.47 ಲಕ್ಷರೂ.) ಪಾವತಿಸುವಂತೆ ಆದೇಶಿಸಲಾಗಿದೆ.

ಹೂಡಿಕೆದಾರರ ಹಣವನ್ನು ದುರುಪಯೋಗ ಪಡಿಸಿಕೊಂಡು, ಆಸ್ತಿ ವಿವರಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯಗಳಿಂದ ಮುಚ್ಚಿಡಲು ಪ್ರಯತ್ನಿಸಿದ್ದಕ್ಕೆ ಬೈಜು ರವೀಂದ್ರನ್ ಅವರಿಗೆ ಈ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಸಿಬ್ಬಂದಿಗೆ ಸಂಬಳ ನೀಡಲು ಬೆಂಗ್ಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟ ಬೈಜೂಸ್ ಸಂಸ್ಥಾಪಕ!
ವಿದೇಶಿ ಹೂಡಿಕೆದಾರರು ಮತ್ತು ಸಾಲದಾತರು ತಮ್ಮ ನಷ್ಟವನ್ನು ವಸೂಲಿ ಮಾಡಲು ಜಾಗತಿಕವಾಗಿ ಇವರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈ ಹಿಂದೆ ಅಮೆರಿಕದ ನ್ಯಾಯಾಲಯ ಕೂಡ ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಬೈಜು ರವೀಂದ್ರನ್ ಅವರಿಗೆ ಭಾರಿ ಮೊತ್ತದ ದಂಡವನ್ನು ವಿಧಿಸಿತ್ತು.
ಭಾರತದ ಜಾರಿ ನಿರ್ದೇಶನಾಲಯ (ED), ಬೈಜುಸ್ ಸಂಸ್ಥೆಯು ವಿದೇಶಿ ಹೂಡಿಕೆ ಪಡೆಯುವಾಗ ಮತ್ತು ವಿದೇಶಕ್ಕೆ ಹಣ ಕಳುಹಿಸುವಾಗ ಸುಮಾರು 9,000 ಕೋಟಿ ರೂ.ಗೂ ಅಧಿಕ ಮೊತ್ತದ ಫೆಮಾ (FEMA) ನಿಯಮಗಳನ್ನು ಉಲ್ಲಂಘಿಸಿದೆ ಎಂದು ತನಿಖೆ ನಡೆಸುತ್ತಿದೆ. ಹೂಡಿಕೆದಾರರನ್ನು ಆಕರ್ಷಿಸಲು ಕಂಪನಿಯ ಆದಾಯದ ಬಗ್ಗೆ ಸುಳ್ಳು ಲೆಕ್ಕಪತ್ರಗಳನ್ನುಸೃಷ್ಟಿಸಿದ ಆರೋಪವೂ ಸೇರಿದೆ.
