ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಧರಿಸುತ್ತಿದ್ದ ಬ್ಲೂ ಜೆರ್ಸಿ ಮೇಲೆ ಇತ್ತೀಚಿನ ಸಮಯದವರೆಗೂ ಕಾಣಿಸಿಕೊಳ್ಳುತ್ತಿದ್ದ ಮೊಬೈಲ್ ಸಂಸ್ಥೆ ಒಪ್ಪೋ ಲೋಗೋ ಕಾಣೆಯಾಗಲಿದೆ. ಈ ಸ್ಥಳದಲ್ಲಿ ಬೆಂಗಳೂರು ಮೂಲದ ಶಿಕ್ಷಣಕ್ಕೆ ಸಂಬಂಧಿಸಿದ ಬೈಜು’ಸ್ ಲರ್ನಿಂಗ್ ಆ್ಯಪ್ ಲೋಗೋ ಕಾಣಿಸಿಕೊಳ್ಳಲಿದೆ.
2017 ರಲ್ಲಿ ಟೀಂ ಇಂಡಿಯಾ ಜೆರ್ಸಿ ಮೇಲೆ ಕಾಣುವ ಬ್ರಾಂಡ್ ಹಕ್ಕುಗಳನ್ನು 5 ವರ್ಷಗಳ ಅವಧಿಗೆ ಒಪ್ಪೋ ಸಂಸ್ಥೆ ಭಾರೀ ಬೆಲೆಗೆ ಖರೀದಿ ಮಾಡಿತ್ತು. ಆದರೆ ಒಪ್ಪೋ ಸಂಸ್ಥೆಯ ಒಪ್ಪಂದ ಇನ್ನೂ 2 ವರ್ಷ ಬಾಕಿ ಇರುವ ಸಂದರ್ಭದಲ್ಲೇ ಸಂಸ್ಥೆ ಒಪ್ಪಂದದಿಂದ ಹೊರ ನಡೆಯಲು ತೀರ್ಮಾನಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಂದಹಾಗೆ, ಒಪ್ಪೋ ಸಂಸ್ಥೆ 2017 ರಲ್ಲಿ ನಡೆದ ಹರಾಜಿನಲ್ಲಿ ಸುಮಾರು 1,079 ಕೋಟಿ ರೂ. ನೀಡಿ ಈ ಹಕ್ಕುಗಳನ್ನು ಪಡೆದುಕೊಂಡಿತ್ತು. ಆದರೆ ಈ ಮೊತ್ತವನ್ನು ಬಿಸಿಸಿಐ ಸಲ್ಲಿಕೆ ಮಾಡುವುದು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಸಂಸ್ಥೆ 2 ವರ್ಷಗಳ ಮುನ್ನವೇ ಒಪ್ಪಂದದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.
Advertisement
Advertisement
ಒಪ್ಪೋ ಒಪ್ಪಂದಿಂದ ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಿಂದ 2022ರ ಮಾರ್ಚ್ ತಿಂಗಳವರೆಗೂ ಬೈಜು’ಸ್ ಸಂಸ್ಥೆಯ ಲೋಗೋ ಕಾಣಿಸಲಿದೆ. ಸೆಪ್ಟೆಂಬರ್ 15 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಟೂರ್ನಿಯ ವೇಳೆಗೆ ಈ ಬದಲಾವಣೆ ಆಗಲಿದೆ. ಬೈಜುಸ್ ತಂತ್ರಜ್ಞಾನ ಮತ್ತು ಆನ್‍ಲೈನ್ ಬೋಧನಾ ಸಂಸ್ಥೆಯಾಗಿದೆ.