ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಗೊಂದಲಗಳು ಸಾಕಷ್ಟಿವೆ. ಯಾರು ಯಾರಿಗೆ ಸಚಿವ ಸ್ಥಾನ ಕೊಡಲಾಗುತ್ತೆ ಅನ್ನೋದೇ ದೊಡ್ಡ ಗೋಜಲಾಗಿದೆ. ಗೆದ್ದಿರುವ ಎಲ್ಲರಿಗೂ ಸಚಿವ ಸ್ಥಾನ ಕೊಡ್ತೀವಿ ಅಂತಿದ್ದ ಯಡಿಯೂರಪ್ಪ ಅವರಿಗೇ ಖುದ್ದು ಎಷ್ಟು ಜನ ಸಚಿವರಾಗ್ತಾರೆ ಅನ್ನೋ ಸ್ಪಷ್ಟತೆ ಇಲ್ಲ. ಸದ್ಯ ಗೆದ್ದ 11 ಶಾಸಕರ ಪೈಕಿ 9 ಅಥವಾ 10 ಮಂದಿಗಷ್ಟೇ ಮಂತ್ರಿಗಿರಿ ಸಿಗಲಿದೆ ಅನ್ನೋ ಚರ್ಚೆ ಪಕ್ಷ ಮತ್ತು ಸರ್ಕಾರದಲ್ಲಿ ಜೋರಾಗಿ ನಡೆಯುತ್ತಿದೆ. ಬೆಳಗಾವಿಯ ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ್ ಪಾಟೀಲ್‍ರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಗಳಿವೆ ಎನ್ನಲಾಗಿದೆ.
Advertisement
ಈ ಸುದ್ದಿಯ ಬೆನ್ನಲ್ಲೇ ಆ ಇಬ್ಬರೂ ಶಾಸಕರನ್ನು ಮನವೊಲಿಸುವ ಕೆಲಸಕ್ಕೆ ಯಡಿಯೂರಪ್ಪ ಕೈಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಕ್ಕಾಗಿಯೇ ಸಿಎಂ ಬಿಎಸ್‍ವೈ ಪುತ್ರ ಬಿ.ವೈ ವಿಜಯೇಂದ್ರ ಅಖಾಡಕ್ಕೆ ಇಳಿದಿದ್ದಾರೆ.
Advertisement
ಬೆಳಗಾವಿಯಲ್ಲಿ ಎಷ್ಟು ಜನಕ್ಕೆ ಸಚಿವ ಸ್ಥಾನ ಎಂಬ ಗೊಂದಲ ನಿವಾರಿಸಲು ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ರಾತ್ರಿ ಬೆಳಗಾವಿಗೆ ರಹಸ್ಯವಾಗಿ ತೆರಳಿರುವ ಬಿ.ವೈ ವಿಜಯೇಂದ್ರ, ಬೆಳಗಾವಿ ಅರ್ಹ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ್ ಪಾಟೀಲ್ ಪೈಕಿ ಒಬ್ಬರು ಅಥವಾ ಇಬ್ಬರಿಗೂ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಯಿದೆ. ಬೆಳಗಾವಿಯಲ್ಲಿ ಇವರಿಬ್ಬರನ್ನು ಭೇಟಿ ಮಾಡಿ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
Advertisement
Advertisement
ಪ್ರಾದೇಶಿಕವಾರು ಪ್ರಕಾರ ಬೆಳಗಾವಿಗೆ 3 ರಿಂದ 4 ಸಚಿವ ಸ್ಥಾನ ಇರಲಿ ಎಂಬ ಪ್ರಸ್ತಾಪವಿದೆ. ಈಗಾಗಲೇ ಲಕ್ಷ್ಮಣ ಸವದಿ ಮತ್ತು ಶಶಿಕಲಾ ಜೊಲ್ಲೆ ಬೆಳಗಾವಿ ಭಾಗದಿಂದ ಸಚಿವರಾಗಿದ್ದಾರೆ. ಇದೀಗ ಇವರ ಜೊತೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ್ ಪಾಟೀಲ್ ರಿಗೂ ಸಚಿವ ಸ್ಥಾನ ಕೊಟ್ರೆ, ಪ್ರಾದೇಶಿಕ ಅಸಮತೋಲನ ಉಂಟಾಗಲಿದೆ. ಅಲ್ಲದೇ ಬೇರೆ ಜಿಲ್ಲೆಗಳ ಆಕಾಂಕ್ಷಿಗಳಲ್ಲಿ ಅಸಮಾಧಾನ ಹೆಚ್ಚಾಗುವ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ಗೆದ್ದ ಮೂವರ ಪೈಕಿ ಒಬ್ಬರು ಅಥವಾ ಇಬ್ಬರಿಗೆ ಸಚಿವ ಸ್ಥಾನ ಕೊಡದಿರಲು ಸಮಾಲೋಚನೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಹರ ಪೈಕಿ 9 ಅಥವಾ 10 ಜನರಿಗೆ ಮಂತ್ರಿಗಿರಿ ಸಾಧ್ಯತೆ ಇದೆ ಎನ್ನಲಾಗಿದೆ.
ವಿಜಯೇಂದ್ರ ಅವರು ಇದೀಗ ಇಬ್ಬರು ಶಾಸಕರಿಗೂ ಈ ವಿಚಾರ ಮನವರಿಕೆ ಮಾಡಿಕೊಟ್ಟಿದ್ದಾರೆ. ಇಬ್ಬರಿಗೂ ಸಚಿವ ಸ್ಥಾನದ ಬದಲು ಪ್ರಭಾವೀ ನಿಗಮ ಮಂಡಳಿ ಕೊಡುವ ಭರವಸೆ ಕೊಡಲಾಗಿದೆ ಎನ್ನಲಾಗಿದೆ. ಆದರೆ ವಿಜಯೇಂದ್ರರ ಸಂಧಾನಕ್ಕೆ ಶಾಸಕರ ಪ್ರತಿಕ್ರಿಯೆ ಏನು ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ.