ದಾವಣಗೆರೆ: ಕಾಂಗ್ರೆಸ್ (Congress) ಪಕ್ಷ ಹತಾಶೆಯ ಮನೋಭಾವದಲ್ಲಿದೆ. ಪ್ರತಾಪ್ ಸಿಂಹ (Pratap Simha) ಅವರ ತಮ್ಮನ ವಿಚಾರದಲ್ಲಿ ಇದೊಂದು ರಾಜಕೀಯ ಪ್ರೇರಿತವಾದ ನಡೆ ಎಂದು ಅನಕ್ಷರಸ್ಥರೂ ಹೇಳುತ್ತಾರೆ ಎಂದು ಸರ್ಕಾರದ ವಿರುದ್ಧ ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯ ಆನಗೋಡು ಮತ್ತು ಅಣಜಿ ನಡುವಿನ ಜಮಾಪುರ ಗ್ರಾಮದಲ್ಲಿ ಬರಗಾಲ ಪರಿಸ್ಥಿತಿಯನ್ನು ವೀಕ್ಷಿಸಿ ಬಳಿಕ ವಿಕ್ರಂ ಸಿಂಹ ಅವರ ಬಂಧನದ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗುತ್ತಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಜನ ಗಮನಿಸಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಹತಾಶೆಯಿಂದ ಈ ರೀತಿ ನಡೆದುಕೊಳ್ಳುತ್ತಿದೆ. ಪ್ರತಾಪ್ ಸಿಂಹ ಹಾಗೂ ಅವರ ಸಹೋದರ ಹೆದರುವ ಪ್ರಶ್ನೆಯೇ ಇಲ್ಲ. ಇದೆಲ್ಲದನ್ನೂ ಅವರು ಎದುರಿಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ದಿನ ಸಾರ್ವತ್ರಿಕ ರಜೆ ಘೋಷಿಸುವಂತೆ ಸಿಎಂಗೆ ಪತ್ರ: ಯಶ್‌ಪಾಲ್ ಸುವರ್ಣ
ರಾಜ್ಯ ಸರ್ಕಾರ ಚುನಾವಣಾ ರಾಜಕಾರಣವನ್ನು ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಬೇಕು. ತಕ್ಷಣ ಪರಿಹಾರ ಘೋಷಿಸಿ, ರೈತರಿಗೆ ನೀಡಬೇಕು. ರೈತ, ಮರುಳಸಿದ್ದಪ್ಪ ಅವರು ಬೆಳೆದ ಮೆಕ್ಕೆ ಜೋಳ ಸಂಪೂರ್ಣವಾಗಿ ನಾಶವಾಗಿದೆ. ಎಕರೆಗೆ 25ರಿಂದ 30 ಸಾವಿರ ರೂ. ಖರ್ಚು ಮಾಡಿದ್ದಾರೆ. ಮರುಳಸಿದ್ದಪ್ಪ ಮಾತ್ರವಲ್ಲದೇ ಅವರ ಕುಟುಂಬಸ್ಥರಾದ ಸಿದ್ದಮ್ಮನ ಕಣ್ಣಲ್ಲೂ ನೀರನ್ನು ನೋಡಿದ್ದೀರಿ. ರೈತರ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಕೇವಲ ರೈತರಿಗೆ ಪರಿಹಾರ ಘೋಷಿಸಿದರೆ ಸಾಕಾಗುವುದಿಲ್ಲ. ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳಂತೆ ಡಿಬಿಟಿ (ನೇರ ಸೌಲಭ್ಯ ವರ್ಗಾವಣೆ) ಮೂಲಕ ತಕ್ಷಣವೇ ರೈತರನ್ನು ತಲುಪುವಂತಾಗಬೇಕು. ಕಿಸಾನ್ ಸಮ್ಮಾನ್ ಯೋಜನೆಯಡಿ ಡಿಬಿಟಿ ಮೂಲಕ ಕೋಟ್ಯಂತರ ರೈತರಿಗೆ 6 ಸಾವಿರ ರೂ. ಜಮಾ ಮಾಡುತ್ತಾರೆ. ಯಡಿಯೂರಪ್ಪ ಅವರು 4 ಸಾವಿರ ಕೊಡುತ್ತಿದ್ದರು. ಅದನ್ನು ಸಿದ್ದರಾಮಯ್ಯ ಸರ್ಕಾರ ಬಂದ್ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳು ಮಧ್ಯವರ್ತಿಗಳಿಲ್ಲದೆ ನೇರವಾಗಿ ಬಡವರ ಖಾತೆಗೆ ತಲುಪುತ್ತಿದೆ. ರಾಜ್ಯ ಸರ್ಕಾರ ಜಾಹೀರಾತು ಕೊಟ್ಟು ಪ್ರಚಾರ ಪಡೆಯುವ ಬದಲಾಗಿ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಿಸಬೇಕು. ಹೊಸ ವರ್ಷದಲ್ಲಿ ನಮ್ಮೆಲ್ಲ ಮುಖಂಡರ ಜೊತೆ ಬೂಟಾಟಿಕೆ ಮಾಡಲು ಬರಗಾಲ ವೀಕ್ಷಣೆಗೆ ಬಂದಿಲ್ಲ. ಇವತ್ತಿನ ಭೇಟಿ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸಬೇಕು. ರಾಜ್ಯದಲ್ಲಿ ಭೀಕರ ಬರಗಾಲದ ಪರಿಣಾಮ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವುದೇ ಮುಖ್ಯಮಂತ್ರಿಗಳ ಆದ್ಯತೆಯಾಗಿದೆ ಎಂದು ಅವರು ಕುಟುಕಿದ್ದಾರೆ.
ರೈತಾಪಿ ವರ್ಗದಲ್ಲಿ ಎಲ್ಲಾ ಸಮಾಜ, ಎಲ್ಲಾ ವರ್ಗ, ಎಲ್ಲಾ ಧರ್ಮದವರೂ ಇರುತ್ತಾರೆ. ರೈತರೆಂದರೆ ಕೇವಲ ಹಿಂದೂಗಳು, ಲಿಂಗಾಯತರಲ್ಲ. ಇವತ್ತು ದಲಿತ ವರ್ಗದ ರೈತ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ರಾಜ್ಯವು ಹೊಸ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ರಾಜ್ಯದ ರೈತರೇ ತಮ್ಮ ಆದ್ಯತೆ ಆಗಿರಲಿ. ರೈತರಿಗೆ ಸ್ಪಂದಿಸಬೇಕು, ನೀವು ಅಲ್ಪಸಂಖ್ಯಾತರಿಗೆ ಸಾವಿರ ಕೋಟಿ, 10 ಸಾವಿರ ಕೋಟಿ ರೂ. ಘೋಷಿಸುವಾಗ ಕೇಂದ್ರವನ್ನು ಕೇಳುತ್ತಿಲ್ಲ. ರೈತರ ವಿಷಯ ಬಂದಾಗ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ತೋರಿಸುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಸಂಸದ ಜಿಎಂ.ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್, ಮಾಜಿ ಸಚಿವ ರೇಣುಕಾಚಾರ್ಯ, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು. ಇದನ್ನೂ ಓದಿ: ನನ್ನನ್ನು ರಾಜಕೀಯವಾಗಿ ಮುಗಿಸಬೇಕೆಂದು ದೊಡ್ಡ ಷಡ್ಯಂತ್ರ ನಡೀತಿದೆ: ಡಿಕೆಶಿ