ನವದೆಹಲಿ: ದೇಶದ ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 5 ವಿಧಾನಸಭಾ ಕ್ಷೇತ್ರಗಳು ಮತ್ತು 1 ಲೋಕಸಭಾ ಕ್ಷೇತ್ರಕ್ಕೆ ಇಂದು ಉಪಚುನಾವಣೆಯ(By Election) ಮತದಾನ ನಡೆಯುತ್ತಿದೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ.
ಸಂಜೆ 6 ಗಂಟೆಯವರೆಗೆ ಮತ ಚಲಾಯಿಸಲು ಅವಕಾಶವಿದ್ದು, ಮತದಾರರ ಸುಲಭ ಸಂಚಾರಕ್ಕಾಗಿ ಆಯಾ ಜಿಲ್ಲಾಡಳಿತಗಳು ಸ್ಥಳೀಯ ರಜೆಯನ್ನು ಘೋಷಿಸಿವೆ. ಮೂರು ದಿನಗಳ ಬಳಿಕ, ಅಂದರೆ ಅಕ್ಟೋಬರ್ 9ರ ಶುಕ್ರವಾರದಂದು ಈ ಎಲ್ಲಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.
ತಮಿಳುನಾಡು:
ಎರಡು ಕ್ಷೇತ್ರಗಳಾದ ಮಧುರಾಂತಕಂ ಮತ್ತು ಧರಾಪುರಂ ಕ್ಷೇತ್ರಗಳ ಎಐಎಡಿಎಂಕೆ ಶಾಸಕರು ರಾಜೀನಾಮೆ ನೀಡಿ ನಟ ವಿಜಯ್(Vijay) ನೇತೃತ್ವದ TVK (ತಮಿಳಗ ವೆಟ್ರಿ ಕಳಗಂ) ಪಕ್ಷವನ್ನು ಸೇರಿದ್ದರು. ಟಿವಿಕೆ ಪರವಾಗಿ ಅದೇ ಇಬ್ಬರು ಅಭ್ಯರ್ಥಿಗಳು ಮತ್ತೆ ಕಣಕ್ಕಿಳಿದಿದ್ದಾರೆ. ನಾಲ್ಕು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಜೋಸೆಫ್ ವಿಜಯ್ ನೇತೃತ್ವದ TVK ಸರ್ಕಾರಕ್ಕೆ ಇದು ಮೊದಲ ಚುನಾವಣಾ ಅಗ್ನಿಪರೀಕ್ಷೆಯಾಗಿದೆ. ಇಲ್ಲಿ TVK, DMK, AIADMK ಮತ್ತು CPI ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.
ಪಶ್ಚಿಮ ಬಂಗಾಳ
ಅತ್ಯಂತ ಹೈ-ಪ್ರೊಫೈಲ್ ಕ್ಷೇತ್ರವಾದ ನಂದಿಗ್ರಾಮದಲ್ಲಿ(Nandigrama) ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರಿಂದ, ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 600 ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ – 150 ಮಂದಿ ಗಡೀಪಾರು
ಅಸ್ಸಾಂ
ಈ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡು ಬಾರಿ ಗೆದ್ದಿದ್ದ ಪ್ರದ್ಯುತ್ ಬೊರ್ಡೊಲೊಯ್ ಅವರು 2026 ರ ಅಸೆಂಬ್ಲಿ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ನಗಾಂವ್ ಲೋಕಸಭಾ ಸ್ಥಾನ ತೆರವಾಗಿದೆ. ಸುಮಾರು 19 ಲಕ್ಷ ಮತದಾರರಿರುವ ಈ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ (ದೇವಶಿಶ್ ಶರ್ಮಾ), ಕಾಂಗ್ರೆಸ್ (ಸಿಬಾಮೊನಿ ಬೋರಾ) ಮತ್ತು AIUDF (ಬದ್ರುದ್ದೀನ್ ಅಜ್ಮಲ್) ನಡುವೆ ತ್ರಿಕೋನ ಫೈಟ್ ನಡೆಯುತ್ತಿದೆ.
ಪುದುಚೇರಿ
ನಡೆದ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಎನ್. ರಂಗಸ್ವಾಮಿ ಅವರು ತಟ್ಟಂಚಾವಡಿ ಮತ್ತು ಮಂಗಳಂ ಎಂಬ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡರಲ್ಲೂ ಭರ್ಜರಿ ಜಯಗಳಿಸಿದ್ದರು. ತಟ್ಟಂಚಾವಡಿ ಕ್ಷೇತ್ರಕ್ಕೆ ಮುಖ್ಯಮಂತ್ರಿ ರಂಗಸ್ವಾಮಿ ರಾಜೀನಾಮೆ ನೀಡಿದ್ದರಿಂದ ಇಂದು ಮತದಾನ ನಡೆಯುತ್ತಿದೆ.

