ಚಾಮರಾಜನಗರ: ಲಘು ಹೃದಯಾಘಾತವಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಜಮೀನಿಗೆ ಬಸ್ ನುಗ್ಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ಬಳಿ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿ ನಡೆದಿದೆ.
ಕೇರಳ ಸಾರಿಗೆ ಬಸ್ ಇದಾಗಿದ್ದು, ಬಸ್ ಕ್ಯಾಲಿಕಟ್‍ನಿಂದ ಮೈಸೂರಿಗೆ ಬರುತ್ತಿತ್ತು. ಬಸ್ಸಿನಲ್ಲಿ ಸುಮಾರು 50 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಸ್ ಗುಂಡ್ಲುಪೇಟೆ ಬಳಿ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿ ಬರುತ್ತಿದ್ದಂತೆ ಚಾಲಕನಿಗೆ ಲಘು ಹೃದಯಾಘಾತವಾಗಿದೆ.
ಈ ವೇಳೆ ಚಾಲಕನಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಬಸ್ ಕೂಡ ಚಾಲಕನ ನಿಯಂತ್ರಣ ತಪ್ಪಿ ಅಡ್ಡದಿಡ್ಡಿ ಹೋಗಿದೆ. ಕೊನೆಗೆ ಚಾಲಕ ರಸ್ತೆ ಬದಿಯ ಜಮೀನಿನ ತಂತಿ ಬೇಲಿಯ ಕಲ್ಲುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಬಸ್ ಡಿಕ್ಕಿ ಹೊಡೆದ ತಕ್ಷಣ ಸ್ಥಳಕ್ಕೆ ಸ್ಥಳೀಯರು ಬಂದು ಹೃದಯಾಘಾತಕ್ಕೆ ಒಳಗಾದ ಬಸ್ ಚಾಲಕನನ್ನು ಕೂಡಲೇ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಈ ಅವಘಡದಿಂದ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.