ಬೆಳಗಾವಿ/ಚಿಕ್ಕೋಡಿ: ಕೆಎಸ್ಆರ್‌ಟಿಸಿ ಬಸ್ ಚಾಲಕರ ಹಾಗೂ ನಿರ್ವಾಹಕರ ನಿರ್ಲಕ್ಷ್ಯ ಹಾಗೂ ಅಸಡ್ಡೆ ಮನೋಭಾವನೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿ ಇರುವ ಸರ್ಕಾರಿ ಪಿಯು ಕಾಲೇಜು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರಾಣಗಳನ್ನು ಒತ್ತೆ ಇಟ್ಟು ಪಾಠ ಕಲಿಯಲು ಬರುವಂತಾಗಿದೆ.
ಬಸ್‍ನಲ್ಲಿ ತಮ್ಮ ಕಲೆಕ್ಷನ್ ಕಡಿಮೆ ಆಗುತ್ತೆ ಎನ್ನುವ ಕಾರಣಕ್ಕಾಗಿ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಚಾಲಕರು ನೂರಾರು ಬಾರಿ ಯೋಚನೆ ಮಾಡುತ್ತಿದ್ದಾರೆ. ಕಾಲೇಜು ಮುಂಭಾಗದಲ್ಲಿ ನಿಲ್ದಾಣಕ್ಕೆ ಅನುಮತಿ ನೀಡಲಾಗಿದ್ದರೂ, ಬಸ್ ನಿಲ್ಲಿಸುವದೇ ಇಲ್ಲ. ಇದರಿಂದ ನಿಲ್ಲುವ ಬಸ್ ಗಾಗಿ ದಿನನಿತ್ಯ ಕಾಲೇಜು ಮುಗಿದ ಮೇಲೆ ಮೂರರಿಂದ ನಾಲ್ಕು ಗಂಟೆ ವಿದ್ಯಾರ್ಥಿಗಳು ಕಾಯಬೇಕು.
ಬಸ್ ಬಂತೆಂದರೆ ಅದರಲ್ಲಿ ಕುರಿ ತುಂಬಿದ ಹಾಗೆ ವಿದ್ಯಾರ್ಥಿಗಳನ್ನು ತುಂಬುತ್ತಾರೆ. ವಿದ್ಯಾರ್ಥಿಗಳು ಹತ್ತುತ್ತಿರುವಾಗಲೇ ಚಾಲಕರು ಬಸ್ ಸ್ಟಾರ್ಟ್ ಮಾಡ್ತಾರೆ. ಇಂತಹ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಕಾಲೇಜು ಸಮೀಪ ಯಾವುದೇ ಬಸ್ ತಂಗುದಾಣ ಇಲ್ಲದೆ ಇರುವ ಕಾರಣ ವಿದ್ಯಾರ್ಥಿಗಳು ರಸ್ತೆ ಬದಿಯೇ ನಿಂತು ಕಾಲ ಕಳೆಯಬೇಕು. ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ವಿದ್ಯಾರ್ಥಿಗಳ ಪಾಡು ಯಾರಿಗೂ ಹೇಳ ತೀರದು ಎಂದು ಸಾರ್ವಜನಿಕರು ಸಾರಿಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ನಮಗೆ 9 ಗಂಟೆಗೆ ಕಾಲೇಜು ಶುರುವಾಗುತ್ತೆ. ಕಾಲೇಜಿಗೆ ಹೋಗಬೇಕೆಂದರೆ ನಮ್ಮ ಬಳಿ ಪಾಸ್ ಇದ್ದಾಗ ಬಸ್‍ಯೊಳಗೆ ಹತ್ತಿಸಲ್ಲ. ಅದೇ ನಾವು ಹಣ ನೀಡಿದರೆ ಅವರು ನಮಗೆ ಬಸ್‍ವೊಳಗೆ ಹತ್ತಿಸಿಕೊಳ್ಳುತ್ತಾರೆ. ಕಾಲೇಜಿನಿಂದ ವಾಪಸ್ ಮನೆಗೆ ಹೋಗುವಾಗ ಕೂಡ ಅವರು ಬಸ್ ನಿಲ್ಲಿಸುವುದಿಲ್ಲ. ನಾವು ಇಲ್ಲಿ ನಿಂತುಕೊಂಡು ಕೈ ತೋರಿಸಿದ್ದರೆ, ಅವರು ತುಂಬಾ ಮುಂದೆ ಹೋಗಿ ಬಸ್ ಅನ್ನು ನಿಲ್ಲಿಸುತ್ತಾರೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv