ರಸ್ತೆ ನಿರ್ಮಿಸುವವರೆಗೂ ವೋಟು ಕೇಳಲು ಬರಬೇಡಿ: ಚುನಾವಣೆಗೆ ಗ್ರಾಮಸ್ಥರ ಬಹಿಷ್ಕಾರ

Public TV
1 Min Read
Chikkamagaluru Elections boycott

ಚಿಕ್ಕಮಗಳೂರು: ನಮ್ಮ ಹಳ್ಳಿಗೆ ರಸ್ತೆ ನಿರ್ಮಿಸಿ ಕೊಡುವವರೆಗೂ ಮತ ಕೇಳಲು ಯಾರೂ ಬರಬೇಡಿ. ರಸ್ತೆ ನಿರ್ಮಾಣ ಮಾಡುವವರೆಗೂ ಮುಂದಿನ ಎಲ್ಲಾ ಚುನಾವಣೆಗಳನ್ನೂ ಬಹಿಷ್ಕಾರ ಮಾಡುತ್ತೇವೆ ಎಂದು ಜಿಲ್ಲೆಯ ಕಳಸ ತಾಲೂಕಿನ ಹೇರಡಿಕೆ ಗ್ರಾಮದ ಜನರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕಳಸದಿಂದ ಕಾರಗದ್ದೆ, ಭಟ್ರಮಕ್ಕಿ, ಹೇರಡಿಕೆ, ಕೈಮರ ಹಾಗೂ ಗಾಳಿಗಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನ ಡಾಂಬರೀಕರಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಳೆದ 30 ವರ್ಷಗಳಿಂದಲೂ ಸಮರ್ಪಕ ರಸ್ತೆ ಇಲ್ಲದೆ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

Chikkamagaluru Elections boycott 2

ರಸ್ತೆ ಸಂಪೂರ್ಣ ಹಾಳಾಗಿದ್ದು, ದೊಡ್ಡ-ದೊಡ್ಡ ಗುಂಡಿಗಳು ಬಿದ್ದಿವೆ. ಈ ಭಾಗದಲ್ಲಿ ಪರಿಶಿಷ್ಟ ಪಂಗಡದ ಗೌಡಲು ಜನಾಂಗಕ್ಕೆ ಸೇರಿದ ಸುಮಾರು 300ಕ್ಕೂ ಹೆಚ್ಚು ಮನೆಗಳಿದ್ದು, 700ಕ್ಕೂ ಅಧಿಕ ಜನಸಂಖ್ಯೆ ಇದೆ. ಮಳೆಗಾಲದಲ್ಲಿ ನಮ್ಮ ಬದುಕು ಕಾಡುಪ್ರಾಣಿಗಳಿಗಿಂತ ಕಡೆಯಾಗಿರುತ್ತದೆ ಎಂದು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Chikkamagaluru Elections boycott 1

ಶಾಲೆ-ಕಾಲೇಜಿಗೆ ಹೋಗುವ ಮಕ್ಕಳು. ಆಸ್ಪತ್ರೆಗೆ ಹೋಗುವ ರೋಗಿಗಳು, ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ಮನೆಗೆ ರೇಷನ್ ತರುವುದು ಕೂಡ ಕಷ್ಟಕರವಾಗಿದೆ. ಈ ಭಾಗಕ್ಕೆ ಅಧಿಕಾರಿಗಳು ಬರುವುದಿಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ ಜನನಾಯಕರು ನಮ್ಮ ಸಮಸ್ಯೆ ಕೇಳಲು ಬರುವುದಿಲ್ಲ. ಕುಡಿಯೋಕೆ ಶುದ್ಧ ನೀರೂ ಇಲ್ಲ. ಮತದಾನ ನಮ್ಮ ಹಕ್ಕೆಂದು ಹಾಕುತ್ತೇವೆ. ಆದರೆ ಜನನಾಯಕರು ನಮ್ಮ ಬೇಡಿಕೆಯನ್ನ ತಿರಸ್ಕರಿಸುತ್ತಲೇ ಬಂದಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

ಜನನಾಯಕರು ಭರವಸೆಯನ್ನು ನೀಡಿ ಕಳಿಸುತ್ತಿದ್ದಾರೆ, ವಿನಃ ಮೂವತ್ತು ವರ್ಷಗಳಿಂದ ರಸ್ತೆ-ನೀರು ಕೊಟ್ಟಿಲ್ಲ. ನಮಗೆ ಪರಿಹಾರ ಕೊಡದಿದ್ದರೆ ಮುಂದೆ ಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ವಿಧಾನಸಭೆ ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ. ಮತ ಕೇಳಲು ಯಾರೂ ಬರಬೇಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *