ಬೆಂಗಳೂರು: 2024 ರಲ್ಲಿ ಮೋದಿ ಸರ್ಕಾರ 41.21 ಲಕ್ಷ ಕೋಟಿ ರೂ. ಬಜೆಟ್ (Budget) ಮಂಡಿಸಿದೆ. 1.05 ಲಕ್ಷ ಕೋಟಿ ರೂ. ಕಡಿಮೆ ತೆರಿಗೆ ಸಂಗ್ರಹ ಮಾಡಿದೆ. ಇನ್ನೂ ನಮ್ಮ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ. 4.09 ಲಕ್ಷ ಕೋಟಿ ರೂ. ಬಜೆಟ್ ಗಾತ್ರ ಹೆಚ್ಚಿದೆ. ಈ ಸಲ ಗ್ಯಾರಂಟಿಗಳಿಗೆ 51 ಸಾವಿರ ಕೋಟಿ ಕೊಡಲಾಗಿದೆ ಎಂದು ಸದನದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಬಜೆಟ್ ಚರ್ಚೆ ವೇಳೆ ಉತ್ತರಿಸಿದ ಅವರು, ನಮ್ಮ ಬಜೆಟ್‌ಗೆ ಎಲ್ಲಾ ಕಡೆಯಿಂದ ಶ್ಲಾಘನೆ ಬಂದಿದೆ. ಜನರ ಕೊಳ್ಳುವ ಶಕ್ತಿ ಹೆಚ್ಚಾದರೆ ಆರ್ಥಿಕ ಪ್ರಗತಿ ಆಗಲಿದೆ. 2024-25ನೇ ಸಾಲಿಗೆ ಹೋಲಿಸಿದರೆ, ಈ ಸಲ ಬಜೆಟ್ ಗಾತ್ರ 10.3% ಬೆಳವಣಿಗೆ ಕಂಡಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಜಿಎಸ್‌ಡಿಪಿಯಲ್ಲಿ ನಾವು ಮೂರನೇ ಸ್ಥಾನ ಹೊಂದಿದ್ದೇವೆ. ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಮಹಾರಾಷ್ಟ್ರದ ನಂತರ ಐದನೇ ದೊಡ್ಡ ಬಜೆಟ್ ನಮ್ಮದು ಎಂದಿದ್ದಾರೆ.
ಕೇಂದ್ರದ ಬಜೆಟ್ ಬೆಳವಣಿಗೆ 5.06% ಮಾತ್ರ, ನಮ್ದು 10.3% ಇದೆ. 2024-25 ರಲ್ಲಿ 1,89,893 ಕೋಟಿ ರೂ. ಸ್ವಂತ ತೆರಿಗೆ ಸಂಗ್ರಹ ಅಂದಾಜಿಸಲಾಗಿತ್ತು. ಫೆಬ್ರವರಿ ಅಂತ್ಯದವರೆಗೆ 1,57,111 ಕೋಟಿ ತೆರಿಗೆ ಸಂಗ್ರಹ ಆಗಿದೆ. 82.7% ಪ್ರಗತಿ ಅಗಿದೆ. ಮಾರ್ಚ್ ಅಂತ್ಯಕ್ಕೆ 1,77000 ಕೋಟಿ ರೂ. ತೆರಿಗೆ ಸಂಗ್ರಹ ಆಗಬಹುದು. ಇದು ನಮ್ಮ ನಿರೀಕ್ಷೆಗಿಂತ ತುಸು ಕಡಿಮೆ, ದೇಶಾದ್ಯಂತ ತೆರಿಗೆ ಸಂಗ್ರಹ ಇಳಿಕೆ ಆಗಿದೆ. ದೇಶದಲ್ಲಿ ನಡೆಯುವ ಬೆಳವಣಿಗೆ ರಾಜ್ಯದ ಮೇಲೂ ಪರಿಣಾಮ ಬೀರುತ್ತದೆ. ಇದು ದೇಶದ ಅರ್ಥಿಕ ಬೆಳವಣಿಗೆ ಸಮರ್ಪಕ ಆಗಿಲ್ಲ ಎಂದು ತೋರಿಸುತ್ತದೆ ಎಂದಿದ್ದಾರೆ.
ಗ್ಯಾರಂಟಿಗಳಿಂದ (Guarantee scheme) ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಈ ಸಲ ವಿತ್ತೀಯ ಕೊರತೆ ಜಿಎಸ್‌ಡಿಪಿ 2.9% ಇದೆ. ಜಿಎಸ್‌ಡಿಪಿ ಎದುರಾಗಿ ನಮ್ಮ ಹೊಣೆಗಾರಿಕೆ 24.91% ಇದೆ. ಕರ್ನಾಟಕದ ವಿತ್ತೀಯ ಕೊರತೆ ಬಿಜೆಪಿ ಕಾಲದಲ್ಲಿ 3.3% ಇತ್ತು. 2.9% ರಷ್ಟು ನಮ್ಮ ಕಾಲದಲ್ಲಿದೆ. ನಾವು ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದೇವೆ. ಕಲ್ಯಾಣ ಯೋಜನೆಗಳಿಗೆ, ಗ್ಯಾರಂಟಿಗಳಿಗೆ, ಸಹಾಯ ಧನಗಳಿಗೆ ಸುಮಾರು 1 ಲಕ್ಷ ಕೋಟಿ ರೂ. ವ್ಯಯ ಮಾಡುತ್ತಿದ್ದೇವೆ. ಇವು ಮಧ್ಯವರ್ತಿಗಳು ಇಲ್ಲದೇ ಜನರಿಗೆ ನೇರ ತಲುಪುವ ಸವಲತ್ತುಗಳಾಗಿವೆ. ರೈತರಿಗೆ ಉಚಿತ ವಿದ್ಯುಗೆ 18 ಸಾವಿರ ಕೋಟಿ ರೂ. ಸಾಮಾಜಿಕ ಭದ್ರತಾ ಪಿಂಚಣಿಗಳಿಗೆ 10,835 ಕೋಟಿ ರೂ. ಮನೆ ನಿರ್ಮಾಣ, ಸಬ್ಸಿಡಿ, ಹಾಲು ಉತ್ಪಾದನೆ ಪ್ರೋತ್ಸಾಹ ಧನ ಎಲ್ಲಾ ಸೇರಿ 1 ಲಕ್ಷ ಕೋಟಿ ರೂ. ಆಗಲಿದೆ ಎಂದಿದ್ದಾರೆ.
2024-25ರ ಅವಧಿಯಲ್ಲಿ ಸರ್ಕಾರಿ ನೌಕರರ ವೇತನ 71,865, ಕೋಟಿ ರೂ. ಪಿಂಚಣಿಗೆ 30,907 ಕೋಟಿ ರೂ. ಸೇರಿ ಒಟ್ಟು 1,02,769 ಕೋಟಿ ರೂ. ವೆಚ್ಚ ಮಾಡಲಾಗಿದೆ. 2025-26 ನೇ ಸಾಲಿಗೆ ಸರ್ಕಾರಿ ನೌಕರ ಸಂಬಳಕ್ಕೆ 85,865 ಕೋಟಿ ರೂ., ಪಿಂಚಣಿಗೆ 38,585 ಕೋಟಿ ರೂ. ಅಂದಾಜು ಮಾಡಲಾಗಿದೆ. ಬಡ್ಡಿ ಪಾವತಿಗೆ 45,600 ಕೋಟಿ ರೂ. ವೇತನ, ಬಡ್ಡಿ ಪಾವತಿ, ಪಿಂಚಣಿಗೆ ಒಟ್ಟು 1,70,040 ಕೋಟಿ ರೂ. ಮೀಸಲಿರಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.