ರಾಯಚೂರು: ಕಲ್ಯಾಣ ಕರ್ನಾಟಕ ಅದರಲ್ಲೂ ರಾಯಚೂರು (Raichur) ಜಿಲ್ಲೆ ಅಪೌಷ್ಟಿಕತೆ ವಿಚಾರದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ. ಹೀಗಾಗಿ ಸರ್ಕಾರ ರಾಯಚೂರು ಜಿಲ್ಲೆಯಲ್ಲಿ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ವಿನೂತನ ಪ್ರಯೋಗಕ್ಕೆ ಮುಂದಾಗಿತ್ತು. ಪ್ರಾಯೋಗಿಕ ಯೋಜನೆ ಸಹ ಯಶಸ್ವಿಯಾಗಿ ಮಕ್ಕಳಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿತ್ತು. ಆದ್ರೆ ಬಜೆಟ್ (Budget) ಕೊರತೆಯಿಂದ ಯೋಜನೆ ಕೇವಲ ಪ್ರಾಯೋಗಿಕವಾಗಿ ಅಂತ್ಯಗೊಂಡಿದೆ. ಈಗ ಪುನಃ ಆರಂಭಿಸುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಈಗಲೂ ಸಾಕಷ್ಟು ಸಂಖ್ಯೆಯ ಮಕ್ಕಳು ಅಪೌಷ್ಟಿಕಯಿಂದ (Malnutrition) ಬಳಲುತ್ತಿದ್ದಾರೆ. ಹೀಗಾಗಿ, ಜಿಲ್ಲಾಡಳಿತ ಕೇಂದ್ರ ಸರ್ಕಾರ ಹಾಗೂ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಅಂಗನವಾಡಿ ಮಕ್ಕಳಿಗೆ ನುಗ್ಗೆ ಪೌಡರ್ ನೀಡುವ ಪ್ರಾಯೋಗಿಕ ಕಾರ್ಯಕ್ರಮವನ್ನ ಜಾರಿಗೆ ತಂದಿತ್ತು. 2023ರ ನವೆಂಬರ್‌ನಿಂದ 2024ರ ಏಪ್ರಿಲ್‌ವರೆಗೆ ಪ್ರಾಯೋಗಿಕವಾಗಿ ನೀಡಲಾಗಿದ್ದ ನುಗ್ಗೆ ಪೌಡರ್‌ನಿಂದ (Moringa Powder) ಜಿಲ್ಲೆಯ 297 ತೀವ್ರತರ ಅಪೌಷ್ಟಿಕ ಮಕ್ಕಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿತ್ತು. ಆದ್ರೆ ನುಗ್ಗೆ ಪೌಡರ್ ನೀಡುವ ಯೋಜನೆಯನ್ನ ಕೈಬಿಡಲಾಗಿದೆ.

ಜಿಲ್ಲೆಯಲ್ಲಿ 1 ಲಕ್ಷ 94 ಸಾವಿರ ಮಕ್ಕಳಿದ್ದು 27,317 ಸಾಧಾರಣ ಅಪೌಷ್ಟಿಕ ಮಕ್ಕಳಿದ್ದಾರೆ. ಇದರಲ್ಲಿ ಸುಮಾರು 300 ತೀವ್ರತರದ ಅಪೌಷ್ಟಿಕ ಮಕ್ಕಳಿದ್ದಾರೆ. 5 ವರ್ಷದೊಳಗಿನ ಮಕ್ಕಳಿಗೆ ನಿತ್ಯ 5 ಗ್ರಾಂ ನಂತೆ ನುಗ್ಗೆ ಪೌಡರ್ ನೀಡಲಾಗುತ್ತಿತ್ತು. ಇದರಿಂದ ಜಿಲ್ಲೆಯಲ್ಲಿ ಶೇಕಡ 9.03ರಷ್ಟು ಅಪೌಷ್ಟಿಕತೆ ನಿವಾರಣೆಯಾಗಿತ್ತು. ಆದ್ರೆ ಬಜೆಟ್ ಕೊರತೆಯಿಂದ ಪ್ರಾಯೋಗಿಕ ಯೋಜನೆ ನಿಂತು ಹೋಗಿದೆ.

ನುಗ್ಗೆ ಪೌಡರ್‌ನ್ನ ಸಾಂಬಾರ್‌ನಲ್ಲಿ, ಹಾಲಿನಲ್ಲಿ ಸೇರಿಸಿ ಮಕ್ಕಳಿಗೆ ಕುಡಿಸಲಾಗುತ್ತಿತ್ತು. ಹಾಲು ಕುಡಿಯದ ಮಕ್ಕಳಿಗೆ ಬಿಸಿನೀರಿನಲ್ಲಿ ಪೌಡರ್ ಹಾಕಿ ಕುಡಿಸಲಾಗುತ್ತಿತ್ತು. ಇದರಿಂದ ಮಕ್ಕಳ ಆರೋಗ್ಯ, ಬೆಳವಣಿಗೆಯಲ್ಲಿ ಸಾಕಷ್ಟು ಬದಲಾವಣೆಯಾಗಿರುವುದನ್ನ ಪೋಷಕರು ಗಮನಿಸಿದ್ದಾರೆ. ಅಲ್ಲದೇ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೂ ಒಳ್ಳೆಯ ಆಹಾರವಾಗಿರುವುದರಿಂದ ನುಗ್ಗೆ ಪೌಡರ್ ವಿತರಣೆಯನ್ನ ಪುನಃ ಪ್ರಾರಂಭಿಸುವಂತೆ ಮಕ್ಕಳ ಪೋಷಕರು, ಅಂಗನವಾಡಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಮೊಟ್ಟೆ, ಬಾಳೆಹಣ್ಣು, ಚಿಕ್ಕಿಗಿಂತಲೂ ನುಗ್ಗೆ ಪೌಡರ್ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂದಿದೆ. ಅಪೌಷ್ಟಿಕತೆ ವಿರುದ್ದ ಹೋರಾಡಲು ಸಹಾಯಕಾರಿಯಾಗಿರುವ, ಬಡವರಿಗೆ ಬಹಳ ಅನುಕೂಲವಾಗುವ ನುಗ್ಗೆ ಪೌಡರ್‌ನ್ನ ನಿರಂತರವಾಗಿ ನೀಡಬೇಕು ಅಂತ ಪೋಷಕರು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಸಹ ಆಸಕ್ತಿಯನ್ನ ಹೊಂದಿದ್ದು ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.

