ಬೆಂಗಳೂರು: ಮಾಜಿ ಸಚಿವ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿಯ ಅಮಾನತು ಆದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಿಂಪಡೆದುಕೊಂಡಿದ್ದಾರೆ.
ಜಮಖಂಡಿ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎನ್ನುವುದರ ಬಗ್ಗೆ ಬುಧವಾರ ಸಂಗಮೇಶ್ ನಿರಾಣಿ ನಗರದ ಬಸವ ಭವನದಲ್ಲಿ ಸಭೆಯನ್ನು ಕರೆದಿದ್ದರು. ಸಭೆ ಕರೆದ ಬೆನ್ನಲ್ಲೇ ಬಿ.ಎಸ್.ಯಡಿಯೂರಪ್ಪ ಸಂಗಮೇಶ್ ನಿರಾಣಿಯವರ ಅಮಾನತು ಆದೇಶವನ್ನು ಹಿಂಪಡೆದುಕೊಂಡಿದ್ದಾರೆ.
ಸಂಗಮೇಶ್‍ಗೆ ಇನ್ನು ಮುಂದೆ ಪಕ್ಷದಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಿಕೊಂಡು ಹೋಗಬೇಕು. ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಶ್ರಮಿಸಿ. ಉಪ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಅಮಾನತು ಆದೇಶ ಹಿಂಪಡೆದ ಬಳಿಕವೂ ಸಂಗಮೇಶ್ ನಿಗದಿಯಾಗಿದ್ದ ಸಭೆಯನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ.
ಅಮಾನತು ಯಾಕೆ?
ಬಿಜೆಪಿಯ ಮಾಜಿ ಸಚಿವ ಮುರುಗೇಶ್ ನಿರಾಣಿ ಸಹೋದರಾಗಿದ್ದ ಸಂಗಮೇಶ್ ನಿರಾಣಿ, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪಕ್ಷದ ನಿಯಮವನ್ನು ಮೀರಿದ್ದರಿಂದ ಸಂಗಮೇಶ್ ನಿರಾಣಿಯವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv