– ವಿಚಾರಣೆಗೆ ಹಾಜರಾದ ಶರಣಗೌಡ ಕಂದಕೂರು ಅಸಮಧಾನ
ರಾಯಚೂರು: ಜಿಲ್ಲೆಯ ದೇವದುರ್ಗ ಪ್ರವಾಸಿ ಮಂದಿರದಲ್ಲಿ ನಡೆದ ಆಪರೇಷನ್ ಕಮಲ ಆಡಿಯೋ ಪ್ರಕರಣ ಹಿನ್ನೆಲೆ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ದೂರುದಾರ ಶರಣಗೌಡರನ್ನ ಇಂದು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಮಾತನಾಡಿರುವ ಶರಣೇಗೌಡ ನನಗೆ ನೂರಕ್ಕೆ ನೂರು ನ್ಯಾಯ ಸಿಗಲ್ಲ ಎಂಬ ವಿಶ್ವಾಸವಿದೆ. ಆದ್ರೂ ಪೊಲೀಸ್ ಅಧಿಕಾರಿಗಳ ಮೇಲೆ ವಿಶ್ವಾಸವಿದೆ ಅಂತ ಹೇಳಿದ್ದಾರೆ.
ಜನಪ್ರತಿನಿಧಿಗಳ ಕೋರ್ಟ್ ನಿಂದ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆ ಮಾಡಬೇಕೆಂದು ಆದೇಶ ಬಂದ ಹಿನ್ನೆಲೆ ತನಿಖಾ ಅಧಿಕಾರಿಯಾಗಿ ರಾಯಚೂರು ಡಿವೈಎಸ್ ಪಿ ಯವರನ್ನ ನೇಮಕ ಮಾಡಿದ್ದಾರೆ. ಡಿವೈಎಸ್ ಪಿ ಶಿವನಗೌಡ ಪಾಟೀಲ್ ನೋಟಿಸ್ ನೀಡಿ ನಮಗೆ ಬರಲು ಹೇಳಿದ್ರು, ಇದರಿಂದಾಗಿ ಇಂದು ವಿಚಾರಣೆ ಬಂದಿದ್ದೇನೆ. ನಾವು ಮಾಡಿರುವ ಆಡಿಯೋ ಹಾಗೂ ನಮ್ಮ ಹೇಳಿಕೆಗಳು ಪಡೆದುಕೊಂಡಿದ್ದಾರೆ. ಒಬ್ಬ ಡಿವೈಎಸ್ ಪಿ ಸಿಎಂ ವಿರುದ್ಧ ಯಾವ ರೀತಿ ತನಿಖೆ ಮಾಡಲು ಆಗುತ್ತೆ. ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಬೇಕಾಗಿತ್ತು ಅಂತ ಶರಣಗೌಡ ಹೇಳಿದ್ದಾರೆ.
ರಾಜೀನಾಮೆ ನೀಡದೆ ತನಿಖೆ ನಡೆಯುತ್ತಿರುವುದರಿಂದ ಮುಂದೆ ಏನಾಗುತ್ತೆ ಎಂಬುವುದು ನಮಗೆ ಗೊತ್ತು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಿ ರಿಪೋರ್ಟ್ ಹಾಕಬಹುದು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲರ ಜೊತೆಗೆ ಈಗಾಗಲೇ ಮಾತುಕತೆ ಆಗಿದೆ. ಈ ತನಿಖಾ ವರದಿಯಲ್ಲಿ ನನಗೆ ನ್ಯಾಯ ಸಿಗಲ್ಲ ಎಂಬ ವಿಶ್ವಾಸವಿದೆ. ಸತ್ಯಕ್ಕೆ ನ್ಯಾಯ ಸಿಗದೇ ಇದ್ದಾಗ ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಥವಾ ಇಡಿ ಇದೆ. ಆಡಿಯೋದಲ್ಲಿ ಎಲ್ಲವೂ ಇದ್ದು, ನ್ಯಾಯ ಸಿಗದೇ ಇದ್ದರೆ ಕಾನೂನು ಹೋರಾಟ ಮುಂದುವರಿಸುವುದಾಗಿ ಜೆಡಿಎಸ್ ಮುಖಂಡ ಶರಣಗೌಡ ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಅಸ್ತಿತ್ವ ನನ್ನ ಕೈಲಿದೆ: ಶರಣಗೌಡ