ನವದೆಹಲಿ: ಭಾರತೀಯ ಸೇನೆ ಯೋಧರಿಗೆ ಕಳಪೆ ಆಹಾರ ನೀಡುತ್ತಿದೆ ಎಂದು ಆರೋಪಿಸಿದ್ದ ಬಿಎಸ್‍ಎಫ್ ಯೋಧ ತೇಜ್ ಬಹದ್ದೂರು ಯಾದವ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ತೇಜ್ ಬಹದ್ದೂರು ಯಾದವ್ ಅವರು ಆರೋಪ ಮಾಡಿದ ಬಳಿಕ ಪ್ರತ್ಯೇಕ ತನಿಖೆ ನಡೆಸಲಾಗಿತ್ತು. ಈಗ ಸ್ಟಾಫ್ ಕೋರ್ಟ್ ತನಿಖೆಯ ವರದಿ ಬಂದ ಬಳಿಕ ಬುಧವಾರ ವಜಾಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ತನಿಖೆಯಲ್ಲಿ ಯಾದವ್ ಸುಳ್ಳು ಆರೋಪ ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬಿಎಸ್‍ಎಫ್ ಕಾಯ್ದೆಯ ಪ್ರಕಾರ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ಯಾದವ್ ಮೂರು ತಿಂಗಳ ಒಳಗಡೆ ಮೇಲ್ಮನವಿ ಸಲ್ಲಿಸಬಹುದು ಎಂದು ಅಧಿಕಾರಿ ತಿಳಿಸಿದರು.
Advertisement
ತೇಜ್ ಬಹದ್ದೂರು ಯಾದವ್ ಜನವರಿಯಲ್ಲಿ ಬಿಎಸ್‍ಎಫ್ ಯೋಧರಿಗೆ ನೀಡುವ ಆಹಾರ ಹೀಗಿದೆ ಎಂದು ಅರೆ ಬೆಂದ ಪರೋಟಾ, ಒಂದು ಲೋಟ ಚಹಾವನ್ನು ತೋರಿಸಿ, ಯೋಧರ ಕಷ್ಟಗಳನ್ನು ಹೇಳಿಕೊಂಡು ಫೇಸ್‍ಬುಕ್‍ನಲ್ಲಿ ವಿಡಿಯೋ ವನ್ನು ಅಪ್‍ಲೋಡ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರದ ಬಗ್ಗೆ ನನ್ನನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಗೂ ಅವರು ಮನವಿಯನ್ನು ಸಲ್ಲಿಸಿದ್ದರು.
Advertisement
ಬಿಎಸ್‍ಎಫ್ ಐಜಿ ಡಿ.ಕೆ ಉಪಾಧ್ಯಾಯ್ ಯಾದವ್ ಅವರ ಈ ಆರೋಪಕ್ಕೆ ಈ ಹಿಂದೆ ಪ್ರತಿಕ್ರಿಯೆ ನೀಡಿ, 2010ರಲ್ಲಿ ಯೋಧ ತೇಜ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಆದರೆ ಅವರ ಕುಟುಂಬವನ್ನು ಪರಿಗಣಿಸಿ ಅವರನ್ನು ಸೇನೆಯಿಂದ ವಜಾ ಮಾಡಿರಲಿಲ್ಲ ಎಂದು ತಿಳಿಸಿದ್ದರು.