ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆನ್ನುವ ವಿಚಾರದಲ್ಲಿ ಈಗ ತಟಸ್ಥರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಈ ಹಿಂದೆ ಪ್ರತ್ಯೇಕ ಧರ್ಮಕ್ಕಾಗಿ ಒತ್ತಾಯಿಸಿದ ಸ್ಫೋಟಕ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಎಬ್ಬಿಸಿರುವ ‘ಪ್ರತ್ಯೇಕ ಧರ್ಮ’ದ ವಿವಾದ ಸಂಬಂಧ ಈಗ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಆದರೆ 2013ರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು ಪ್ರತ್ಯೇಕ ಧರ್ಮಕ್ಕೆ ಪ್ರಸ್ತಾವನೆ ಇಟ್ಟಿದ್ದ ಸ್ಫೋಟಕ ಮಾಹಿತಿ ಇದೀಗ ಲಭ್ಯವಾಗಿದೆ.
Advertisement
Advertisement
‘ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು’ ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾ ಸಭಾ ನಾಲ್ಕು ವರ್ಷಗಳ ಹಿಂದೆ ಸಲ್ಲಿಸಿದ್ದ ಪತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವರಾದ ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ, ಎಂ.ಬಿ ಪಾಟೀಲ, ವಿನಯ ಕುಲಕರ್ಣಿ, ಮುಖ್ಯ ಸಚೇತಕ ಅಶೋಕ ಪಟ್ಟಣ, ಸಂಸದ ಪ್ರಭಾಕರ ಕೋರೆ, ಮಾಜಿ ಸಚಿವರಾದ ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಲಿಂಗಾಯತ ಮುಖಂಡರು ಸಹಿ ಕೂಡ ಮಾಡಿದ್ದಾರೆ.
Advertisement
Advertisement
‘ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಸಲ್ಲಿಸಿದ ಮನವಿಗೆ ನಮ್ಮೆಲ್ಲರ ಒಪ್ಪಿಗೆ ಇದ್ದು, ಆದಷ್ಟು ಬೇಗ ಪ್ರತ್ಯೇಕ ಧರ್ಮ ಘೋಷಣೆ ಮಾಡಬೇಕು’ ಎಂದು ಮನವಿಯಲ್ಲಿ ನಾಯಕರು ತಿಳಿಸಿದ್ದಾರೆ. 2013ರ ಜುಲೈ 7ರಂದು ಕೇಂದ್ರ ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆಗೆ ಹಾಗೂ ಅದೇ ವರ್ಷ ಜುಲೈ 25ರಂದು ಅಂದಿನ ಪ್ರಧಾನಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ.
ಪತ್ರದಲ್ಲೇನಿದೆ?:
ಅಖಿಲ ಭಾರತ ವೀರಶೈವ ಮಹಾಸಭಾ (ರಿ)
ಗೆ,
ಡಾ. ಮನಮೋಹನ್ ಸಿಂಗ್
ಗೌರವಾನ್ವಿತ ಪ್ರಧಾನ ಮಂತ್ರಿಗಳು
ಭಾರತ ಸರ್ಕಾರ
ನವದೆಹಲಿ-110001
ಮಾನ್ಯರೇ,
ವಿಷಯ: ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವನ್ನಾಗಿ ಪರಿಗಣಿಸುವಂತೆ, ಹಾಗೂ ಜನಗಣತಿಯಲ್ಲಿ ಪ್ರತ್ಯೇಕ ಕೋಡ್, ಕಾಲಂ ನೀಡುವಂತೆ ಕೋರಿ ಸಲ್ಲಿಸಿದ ಮನವಿ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಗೋವಾ ಸೇರಿದಂತೆ ದೇಶದ ಇತರೆ ಪ್ರದೇಶಗಳ ಜನಪ್ರತಿನಿಧಿಗಳಾದ ನಾವು ದಿನಾಂಕ 25-72013 ರಂದು ಬೆಂಗಳೂರಿನಲ್ಲಿ ಸಭೆ ಸೇರಿ, ಸುಮಾರು 4 ಕೋಟಿ ಜನಸಂಖ್ಯೆ ಹೊಂದಿರುವ ವೀರಶೈವ-ಲಿಂಗಾಯತ ಸಮುದಾಯವನ್ನ ಸ್ವತಂತ್ರ ಧರ್ಮವಾಗಿ ಪರಿಗಣಿಸುವಂತೆ ಮನವಿ ಸಲ್ಲಿಸಲು ತೀರ್ಮಾನಿಸಲಾಯ್ತು.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು ಕೂಡ ಕೇಂದ್ರ ಗೃಹ ಸಚಿವರಿಗೆ ವೀರಶೈವ-ಲಿಂಗಾಯತ ಸಮುದಾಯವನ್ನ ಸ್ವತಂತ್ರ ಧರ್ಮವಾಗಿ ಪರಿಗಣಿಸುವಂತೆ ಮನವಿ ಪತ್ರವನ್ನ ಸಲ್ಲಿಸಿದ್ದು, ಜನಗಣತಿ ಸಂದರ್ಭದಲ್ಲಿ ಜೈನ, ಬೌದ್ಧ, ಸಿಖ್ ಧರ್ಮಗಳಿಗೆ ಇರುವ ಪ್ರತ್ಯೇಕ ಮಾನ್ಯತೆಯಂತೆ ವೀರಶೈವ ಲಿಂಗಾಯತ ಧರ್ಮಕ್ಕೂ ನೀಡಬೇಕೆಂದು ಕೇಳಿಕೊಂಡಿರುತ್ತಾರೆ.
ನಾವು ವೀರಶೈವ ಲಿಂಗಾಯತ ಧರ್ಮದ ಅನುಯಾಯಿಗಳಾಗಿದ್ದು, ನಾವೆಲ್ಲರೂ ವೀರೆಶೈವ ಲಿಂಗಾಯತ ಧರ್ಮವನ್ನ ಸ್ವತಂತ್ರ ಧರ್ಮವನ್ನಾಗಿ ಪರಿಗಣಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಸಲ್ಲಿಸಿರುವ ಮನವಿ ಪತ್ರವನ್ನ ನಾವೆಲ್ಲಾ ಒಗ್ಗಟ್ಟಾಗಿ ಬೆಂಬಲಿಸುತ್ತೇವೆ. ಹಾಗೂ ಗೃಹ ಸಚಿವರಿಗೆ ಸಲ್ಲಿಸಿರುವ ಮನವಿಯನ್ನ ಪರಿಗಣಿಸಲು ಸಲಹೆ ನೀಡಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ಬಸವ ಸಮಿತಿ ಅಧ್ಯಕ್ಷರು, ಮಹಾರಾಷ್ಟ್ರ, ಕೇರಳ ರಾಜ್ಯಘಟಕದ ಅಧ್ಯಕ್ಷರು, ಕರ್ನಾಟಕ, ಆಂದ್ರ ಪ್ರದೇಶ, ತಮಿಳುನಾಡು ರಾಜ್ಯದ ಸಚಿವರು, ಶಾಸಕರು, ಪರಿಷತ್ ಸದಸ್ಯರು ನ್ಯಾಯಕ್ಕಾಗಿ ಈ ಮನವಿ ಸಲ್ಲಿಸುತ್ತಿದ್ದು, ಯಾವುದೇ ಕಾರಣಕ್ಕೂ ತಡ ಮಾಡದೇ ನಮ್ಮ ಮನವಿಯನ್ನ ಪುರಸ್ಕರಿಸಬೇಕೆಂದು ಕೇಳಿಕೊಳ್ಳುತ್ತೇವೆ.
ವೀರಶೈವ ಲಿಂಗಾಯತ ಅನುಯಾಯಿಗಳ ಸಂಖ್ಯೆ ಸಿಖ್, ಜೈನ, ಬೌಧ ಧರ್ಮದ ಅನುಯಾಯಿಗಳಿಂದ ಹೆಚ್ಚಿದ್ದಾರೆ. ಇದೆಲ್ಲವನ್ನ ಪರಿಗಣನೆಗೆ ತೆಗೆದುಕೊಂಡು ನಮ್ಮ ಧರ್ಮಕ್ಕೆ ನ್ಯಾಯ ಒದಗಿಸಿ. ಜನಗಣತಿ ಸಮಯದಲ್ಲಿ ವೀರಶೈವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಕಾಲಂ/ಕೋಡ್ ನಂಬರ್ ನೀಡುವುದರ ಮೂಲ ವೀರಶೈವ ಲಿಂಗಾಯತರನ್ನ ಜನಸಂಖ್ಯೆಯನ್ನ ಕ್ರೋಢೀಕರಿಸಿ, ಭಾರತ ಸರ್ಕಾರ ಸ್ವತಂತ್ರ ಧರ್ಮವಾಗಿ ಘೋಷಿಸಿ ಎಂದು ಕೇಳಿಕೊಳ್ಳುತ್ತೇವೆ.
ವಂದನೆಗಳೊಂದಿಗೆ ಇಂತಿ ನಿಮ್ಮ ವಿಶ್ವಾಸಿ