– ತಪ್ಪು ಮಾಹಿತಿ ನೀಡುವ ಬದಲು, ಜನರಲ್ಲಿ ಜಾಗೃತಿ ಮೂಡಿಸಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯನವರು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್‍ಸಿ ಬಗ್ಗೆ ಅಲ್ಪ ಸಂಖ್ಯಾತರಿಗೆ ಇರುವ ಗೊಂದಲವನ್ನು ಬಗೆಹರಿಸಬೇಕೆ ಹೊರತು, ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರು ತಪ್ಪು ಗ್ರಹಿಕೆಯಿಂದ ಪ್ರತಿಭಟನೆ ಮಾಡಬೇಡಿ. ಈ ಕುರಿತು ಎಲ್ಲವನ್ನೂ ಅರಿತು ನಂತರ ಪ್ರತಿಭಟನೆ ನಡೆಸಿ. ವಿರೋಧ ಪಕ್ಷಗಳು ಹಾಗೂ ನಾಯಕರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡದೆ, ಈ ಕುರಿತು ಜನರಿಗೆ ಸಂಪೂರ್ಣ ಮಾಹಿತಿ ನೀಡಿ, ಜಾಗೃತರನ್ನಾಗಿ ಮಾಡಿ. ತಪ್ಪು ಮಾಹಿತಿ ನೀಡಿ ಪ್ರಚೋದನೆಗೆ ಕಾರಣರಾಗಬೇಡಿ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷಗಳು ತಪ್ಪು ಮಾಹಿತಿ ನೀಡಿ, ಪ್ರತಿಭಟನೆಗೆ ಪ್ರೇರೇಪಿಸುವ ಮೂಲಕ ಹಿಂಸಾಚಾರಕ್ಕೆ ದಾರಿ ಮಾಡುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ ಸುಧೀರ್ಘ ಚರ್ಚೆ ಬಳಿಕ ಪಾಸಾಗಿದೆ. ಕುಮಾರಸ್ವಾಮಿಯವರು ಮಂಗಳೂರಿನಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಜನ ಪ್ರತಿಭಟನೆಗೆ ಬಂದಿದ್ದರೇ ಹೊರತು ಯುದ್ಧಕ್ಕೆ ಬಂದಿರಲಿಲ್ಲ. ಕೇರಳದವರು ಮನುಷ್ಯರಲ್ವಾ, ಅವರು ಪ್ರತಿಭಟಿಸಬಾರದಾ ಅಂತ ಕೇಳಿದ್ದಾರೆ. ಆದರೆ ಮಂಗಳೂರಿನಲ್ಲಿ ಕಲ್ಲು ತೂರಾಟ ಮಾಡಿದ್ದು ಪ್ರತಿಭಟನಾಕಾರರು. ಪೊಲೀಸ್ ಶಸ್ತ್ರಾಸ್ತ್ರಗಾರಕ್ಕೆ ನುಗ್ಗಲು ಪ್ರಯತ್ನ ಮಾಡಿದ್ದು ಅದೇ ಪ್ರತಿಭಟನಾಕಾರರು. ಹೀಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಕುಮಾರಸ್ವಾಮಿ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಅಲ್ಪಸಂಖ್ಯಾತರ ದಾರಿತಪ್ಪಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆ ಎಂದರು.
ಅಡ್ರೆಸ್ಸಿಗೆ ಇಲ್ಲದಂತಾಗಿದ್ದೀರಿ:
ಮಂಗಳೂರಿನಲ್ಲಿ ಮುಸ್ಲಿಂ ಮುಖಂಡರು, ಧರ್ಮ ಗುರುಗಳ ಜೊತೆ ನಾನು ಮಾತನಾಡಿದ್ದೇನೆ. ಯಾರೂ ಕಾಯ್ದೆ ವಿರೋಧಿಸಿ ಮಾತಾಡಲಿಲ್ಲ. ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಅಲ್ಲದೆ ಕುಮಾರಸ್ವಾಮಿಯವರು ಯಡಿಯೂರಪ್ಪ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ ನೋಡೋಣ ಎಂದು ಹೇಳಿದ್ದಾರೆ. ಇನ್ನು ಮೂರೂವರೆ ವರ್ಷಗಳ ಕಾಲ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಆದರೆ ನೀವು ಈಗಲೇ ಅಡ್ರೆಸ್ಸಿಗೆ ಇಲ್ಲದಂತಾಗಿದ್ದೀರಿ. ಈಗಲೇ ಹೀಗಾದರೆ ಮೂರುವರೆ ವರ್ಷಗಳ ನಂತರ ನಿಮ್ಮ ಪರಿಸ್ಥಿತಿ ಹೇಗಾಗಿರುತ್ತದೆಯೋ ಗೊತ್ತಿಲ್ಲ ಎಂದು ಕುಮಾರಸ್ವಾಮಿಯವರಿಗೆ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.