ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ಕೂಗು ಕೇಳಿಬರಲು ಸಿಎಂ ಕುಮಾರಸ್ವಾಮಿ ಅವರು ಕಾರಣ. ಮಗುವನ್ನು ಚಿವುಟೋದು, ತೊಟ್ಟಿಲು ತೂಗುವ ಎರಡು ಕೆಲಸವನ್ನು ಅವರು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.
ಉತ್ತರ ಕರ್ನಾಟಕದ ಮುಖಂಡರು ಪ್ರತ್ಯೇಕತೆಗಾಗಿ ಹೋರಾಟಕ್ಕಿಳಿದಿದ್ದರು, ಇಂದು ಹೋರಾಟ ಬಿಟ್ಟು ಸಹಕಾರ ಕೊಟ್ಟಿದ್ದಾರೆ. ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಾನು ಬೆಳಗಾವಿಗೆ ಹೋಗಿ ಹೋರಾಟಗಾರರಿಗೆ, ಸ್ವಾಮೀಜಿಗಳಿಗೆ ಮನವಿ ಮಾಡಿ ಬಂದಿದ್ದೆ. ದೇವರ ದಯೆಯಿಂದ ಇಂದು ಯಾರೂ ಹೋರಾಟಕ್ಕಿಳಿಯದೇ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು.
Advertisement
Advertisement
ಇದೇ ವೇಳೆ ಹೋರಾಟಕ್ಕೆ ಬಿಜೆಪಿ ಕುಮ್ಮಕ್ಕು ಎಂಬ ಕಾಂಗ್ರೆಸ್, ಜೆಡಿಎಸ್ ಆರೋಪಕ್ಕೆ ಕಿಡಿಕಾರಿದ ಬಿಎಸ್‍ವೈ, ಯಾರೋ ತಲೆ ತಿರುಕರು ಮಾತನಾಡಿದ್ದಾರೋ, ಬೆಂಕಿ ಹಚ್ಚಿದರೋ ಅವರಿಗೆ ಈ ರೀತಿ ಹಗುರವಾಗಿ ಮಾತನಾಡುವ ಹಕ್ಕಿಲ್ಲ. ಸಿಎಂ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಹೋರಾಟಗಾರರ ವಿಚಾರದಲ್ಲಿ ಮಾಡಬೇಕಿದ್ದ ಕೆಲಸವನ್ನು ನಾನು ಬೆಳಗಾವಿಗೆ ಹೋಗಿ ಮಾಡಿದ್ದೇನೆ. ಅದ್ದರಿಂದ ಈ ರೀತಿ ಹಗುರವಾಗಿ ಮಾತನಾಡುವುದು ಯಾರಿಗೂ ಶೋಭೆ ತರಲ್ಲ. ರಾಜ್ಯದಲ್ಲಿ ಯಾರು ಬೆಂಕಿ ಹಚ್ಚುತ್ತಿದ್ದಾರೆ, ಯಾರು ಶಾಂತಪಡಿಸುತ್ತಿದ್ದಾರೆ ಎಂದು ಜನತೆಗೆ ಅರ್ಥವಾಗಿದೆ ಎಂದು ವಾಗ್ದಾಳಿ ನಡೆಸಿದರು.
Advertisement
ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಹಿನ್ನೆಲೆ ನಾವು ಎಲ್ಲಾ ಪ್ರಮುಖರ ಜೊತೆ ಸಮಾಲೋಚಿಸಿ ಸಿದ್ಧತೆ ಮಾಡುತ್ತಿದ್ದೇವೆ. ಹೆಚ್ಚು ಸ್ಥಾನ ಗೆಲ್ಲಲು ನಮ್ಮ ಎಲ್ಲಾ ಕಾರ್ಯಕರ್ತರು ಸಿದ್ಧರಾಗುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಬಗ್ಗೆ ನಾವು ಏಕೆ ತಲೆಕೆಡಿಸಿಕೊಳ್ಳಬೇಕು. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದರು.