ವಿಡಿಯೋ ವಿಚಾರಕ್ಕೆ ಬಿಎಸ್‍ವೈ ಪಿಎಯಿಂದ ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್‍ಗೆ ಸುಪಾರಿ?

Public TV
2 Min Read
BSY PA ESH PA MODEL

ಬೆಂಗಳೂರು: ಬಿಎಸ್‍ವೈ ಈಶ್ವರಪ್ಪ ನಡುವಿನ ಸಮರ ಆಯ್ತು, ಈಗ ಇಬ್ಬರು ನಾಯಕರ ಪಿಎಗಳ ನಡುವೆ ವಾರ್ ಆರಂಭವಾಗಿದೆ. ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್ ಮಾಡಲು ಸುಪಾರಿ ಕೊಟ್ಟಿದ್ದೆ ಬಿಎಸ್ ಯಡಿಯೂರಪ್ಪ ಅವರ ಪಿಎ ಎನ್ನುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೌದು. ಮಾಡೆಲ್ ಒಬ್ಬಳ ಜೊತೆ ಬಿಎಸ್‍ವೈ ಪಿಎ ಸಂತೋಷ್ ಗೆ ಸಂಬಂಧವಿತ್ತು. ಸಂತೋಷ್ ಜೊತೆಗಿನ ಕೆಲವೊಂದು ರಹಸ್ಯ ವಿಡಿಯೋ ಹಾಗೂ ವಾಟ್ಸಾಪ್ ಮೆಸೇಜ್‍ಗಳನ್ನು ಮಾಡೆಲ್ ಹೊಂದಿದ್ದಳು. ಈ ವಿಡಿಯೋ ಮತ್ತು ಮೆಸೇಜ್ ಗಳನ್ನು ಈಶ್ವರಪ್ಪ ಪಿಎ ವಿನಯ್ ಗೆ ಮಾಡೆಲ್ ಕೊಟ್ಟಿದ್ದಳು.

ಈ ವಿಚಾರ ತಿಳಿದ ಸಂತೋಷ್ ವಿನಯ್ ಅವರನ್ನು ಕಿಡ್ನಾಪ್ ಮಾಡುವಂತೆ ಬಿಜೆಪಿ ಯುವ ಮೋರ್ಚಾದ ನಾಯಕ ರಾಜೇಂದ್ರಗೆ ಸೂಚನೆ ನೀಡಿದ್ದರು. ರಾಜೇಂದ್ರ ರೌಡಿಗಳನ್ನ ಸಂಪರ್ಕಿಸಿ ವಿನಯ್ ಕಿಡ್ನ್ಯಾಪ್ ಮಾಡಿ, ಪೆನ್‍ಡ್ರೈವ್ ಮತ್ತು ಮೊಬೈಲ್ ಕಿತ್ತುಕೊಳ್ಳುವಂತೆ ಸೂಚಿಸಿದ್ದರು.

ಕೃತ್ಯಕ್ಕೆ ಸಹಕರಿಸಿದರೆ ಮುಂದೆ ನಿಮ್ಮ ರೌಡಿಶೀಟರ್ ತೆಗೆಸುವುದಾಗಿ ಭರವಸೆಯ ಮಾತುಕತೆ ನಡೆದಿತ್ತು. ಆದರೆ ರೌಡಿಗಳಿಗೆ ಕಿಡ್ನ್ಯಾಪ್ ಮಾಡಲು ಪುಡಿಗಾಸು ಕೂಡ ನೀಡಿರಲಿಲ್ಲ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

ಆರ್‍ಎಸ್‍ಎಸ್‍ಗೆ ಗೊತ್ತಿತ್ತು: ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ಪ್ರಕರಣ ಆರ್‍ಎಸ್‍ಎಸ್ ನಾಯಕರಿಗೆ ತಿಳಿದಿದೆ ಎನ್ನುವ ವಿಚಾರ ಈಗ ಲಭ್ಯವಾಗಿದೆ. 15 ದಿನಗಳ ಹಿಂದೆ ಆರ್‍ಎಸ್‍ಎಸ್ ನಾಯಕರು ಮತ್ತು ಬಿಎಸ್‍ವೈ ನಡುವೆ ಸಭೆ ನಡೆದಿತ್ತು. ಈ ಸಭೆಯಲ್ಲಿ ಬಿಎಸ್‍ವೈಗೆ ಆಪ್ತ ಸಹಾಯಕ ಸಂತೋಷ್ ಬದಲಾಯಿಸುವಂತೆ ಸಲಹೆ ನೀಡಲಾಗಿತ್ತು. ಕಾ.ಪು.ಸಿದ್ದಲಿಂಗಸ್ವಾಮಿ ಅವರು ಚುನಾವಣೆಗೆ ನಿಲ್ಲುವುದು ಬೇಡ. ಅವರನ್ನು ಮತ್ತೆ ಆಪ್ತ ಸಹಾಯಕನಾಗಿ ನೇಮಕ ಮಾಡಿಕೊಳ್ಳುವಂತೆ ಆರ್‍ಎಸ್‍ಎಸ್ ನಾಯಕರು ಸಲಹೆ ನೀಡಿದ್ದರು ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

2018ರ ನಂತರ ಕಾ.ಪು.ಸಿದ್ದಲಿಂಗಸ್ವಾಮಿಗೆ ಯಾವುದಾದರೂ ಸ್ಥಾನಮಾನ ನೀಡೋಣ ಅಲ್ಲಿ ತನಕ ನಿಮ್ಮ ಆಪ್ತ ಸಹಾಯಕನಾಗಿ ಇರಲಿ ಎಂದು ಆರ್‍ಎಸ್‍ಎಸ್ ಸಲಹೆ ನೀಡಿದ್ದರೂ ಈ ವಿಚಾರದ ಬಗ್ಗೆ ಬಿಎಸ್‍ವೈ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ವಿಚಾರದ ಬಗ್ಗೆ ವಿನಯ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದು, ನನ್ನ ಬಳಿ ಯಾವುದೇ ವಿಡಿಯೋಗಳು ಇಲ್ಲ. ನನ್ನನ್ನು ಕಿಡ್ನಾಪ್ ಮಾಡಿದ್ದು ಯಾರು ಎನ್ನುವುದು ತಿಳಿದಿಲ್ಲ. ವಿಡಿಯೋ ಬಗ್ಗೆ ಬಿಎಸ್‍ವೈ ಪಿಎ ಸಂತೋಷ್ ಅವರನ್ನೇ ಕೇಳಬೇಕು ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ಮೇ 11ರಂದು ಮಹಾಲಕ್ಷ್ಮೀ ಲೇಔಟ್ ಬಳಿ ವಿನಯ್ ಅವರ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ಸುತ್ತುವರಿದು ಅಪಹರಿಸಲು ಯತ್ನಿಸಿತ್ತು. ಬೈಕ್ ನಲ್ಲಿ ಬಂದಿದ್ದ ಇಬ್ಬರು ವಿನಯ್ ಮೇಲೆ ಹಲ್ಲೆ ನಡೆಸಿದ್ದರು. ಅಪಹರಣಕ್ಕೆ ಯತ್ನಿಸಲು ಮುಂದಾದಾಗ ವಿನಯ್ ರಕ್ಷಣೆಗಾಗಿ ಕೂಗಿಕೊಂಡಿದ್ದರು.

ಇದನ್ನೂ ಓದಿ: ಬಿಜೆಪಿ ಯುವ ಮೋರ್ಚಾ ಲೀಡರ್ ಆದೇಶದ ಮೇರೆಗೆ ಈಶ್ವರಪ್ಪ ಪಿಎ ಕಿಡ್ನಾಪ್?

Share This Article