ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಇಂದು 75 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಬಿಎಸ್‍ವೈ ಅಭಿಮಾನಿಗಳು ಫ್ಲೆಕ್ಸ್, ಬ್ಯಾನರ್ ಗಳಲ್ಲಿ ಜಾಣ್ಮೆ ಮೆರೆದಿದ್ದಾರೆ.
ಹೌದು, ಕಳೆದ ವರ್ಷ 74 ನೇ ಜನ್ಮದಿನದ ಶುಭಾಶಯಗಳು ಎಂದು ಬರೆದು ಅಭಿಮಾನಿಗಳು ಬ್ಯಾನರ್, ಫ್ಲೆಕ್ಸ್ ಹಾಕಿದ್ದರು. ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಯಾವುದೇ ಅಧಿಕಾರದ ಹುದ್ದೆಯಿಲ್ಲ ಎನ್ನುವ ಅಲಿಖಿತ ನಿಯಮದ ಹಿನ್ನೆಲೆಯಲ್ಲಿ ಈ ಬ್ಯಾನರ್ ಗಳನ್ನು ನೋಡಿ ಬಿಎಸ್‍ವೈ ಅಸಮಾಧಾನಗೊಂಡಿದ್ದರು.
ಈ ಕಾರಣಕ್ಕಾಗಿ ಈ ಬಾರಿ ಎಷ್ಟನೇ ಹುಟ್ಟುಹಬ್ಬ ಎನ್ನುವ ವಿಚಾರದ ಗೋಜಿಗೆ ಹೋಗದ ಬೆಂಬಲಿಗರು ಫ್ಲೆಕ್ಸ್ ಮತ್ತು ಬ್ಯಾನರ್ ಗಳಲ್ಲಿ ಕೇವಲ “ಜನ್ಮದಿನದ ಶುಭಾಶಯಗಳು” ಎಂದಷ್ಟೇ ಬರೆದಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿ ಎದುರಿನ ಫ್ಲೆಕ್ಸ್, ಬ್ಯಾನರ್ ಗಳಲ್ಲಿ ಎಷ್ಟನೇ ಹುಟ್ಟುಹಬ್ಬ ಎಂಬುದರ ಉಲ್ಲೇಖವೇ ಇಲ್ಲ.
ಮೋದಿ ಪ್ರಧಾನಿಯಾದ ಬಳಿಕ 75 ವರ್ಷ ಮೀರಿದವರಿಗೆ ಅಧಿಕಾರವಿಲ್ಲ ಎಂಬ ಅಲಿಖಿತ ನಿಯಮ ಜಾರಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಸೇರಿ ಹಲವರಿಗೆ ಮಂತ್ರಿ ಸ್ಥಾನ ತಪ್ಪಿತ್ತು. ಈ ಎಲ್ಲ ಕಾರಣಗಳಿಂದ ಮುಜುಗರ ತಪ್ಪಿಸಲು ಬಿಜೆಪಿ ಹೈಕಮಾಂಡ್ ಎಲ್ಲಿಯೂ ಬಿಎಸ್‍ವೈ ವಯಸ್ಸು ಉಲ್ಲೇಖಿಸದಂತೆ ಸೂಚಿಸಿದೆ ಎನ್ನಲಾಗಿದೆ.
ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಸೇರಿದಂತೆ ಹಿರಿಯ ನಾಯಕರನ್ನು ಬಿಜೆಪಿ ಈಗ ಮಾರ್ಗದರ್ಶನ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
https://youtu.be/hnxmEg9yyzc