ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ (Delhi Liquor Policy Case) ಬಂಧನಕ್ಕೊಳಗಾಗಿರುವ ಭಾರತೀಯ ರಾಷ್ಟ್ರ ಸಮಿತಿ (BRS) ನಾಯಕಿ ಕೆ.ಕವಿತಾ (K.Kavitha) ಅವರನ್ನು 3 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಕಳುಹಿಸಲಾಗಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈಚೆಗೆ ದೆಹಲಿಯ ತಿಹಾರ್ ಜೈಲಿನಿಂದಲೇ ಕೆ.ಕವಿತಾ ಅವರನ್ನು ಸಿಬಿಐ ವಶಕ್ಕೆ ಪಡೆದಿತ್ತು. ನಂತರ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಕವಿತಾ ಅವರನ್ನು ಏ.15 ರ ವರೆಗೆ ಸಿಬಿಐ ಕಸ್ಟಡಿಗೆ ವಹಿಸಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಆದೇಶ ಹೊರಡಿಸಿದೆ. ಇದನ್ನೂ ಓದಿ: ಜೈಲಿನಿಂದಲೇ ಬಿಆರ್‌ಎಸ್ ನಾಯಕಿಯನ್ನು ಬಂಧಿಸಿದ ಸಿಬಿಐ
46 ವಯಸ್ಸಿನ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿತ್ತು. ಅವರ ಸಹೋದರ ಹಾಗೂ ತೆಲಂಗಾಣ ಮಾಜಿ ಸಚಿವ ಕೆ.ಟಿ.ರಾಮರಾವ್ ಅವರು ಇಡಿ ಅಧಿಕಾರಿಗಳ ವಿರುದ್ಧ ವಾದ ಮಂಡಿಸಿದ್ದರು.
ನಂತರ ಕವಿತಾರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ತಿಹಾರ್ ಜೈಲಿನಲ್ಲಿರುವಾಗಲೇ ಮತ್ತೊಂದು ಪ್ರಕರಣದಲ್ಲಿ ಗುರುವಾರ ಸಂಜೆ ಸಿಬಿಐ ಅವರನ್ನು ಬಂಧಿಸಿತು. ಮದ್ಯದ ಪರವಾನಿಗೆಗಾಗಿ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರೂ. ಲಂಚ ನೀಡುವ ಸಂಬಂಧ ಸಾಕ್ಷಿ ಹೇಳಿಕೆಗಳು, ವಾಟ್ಸಾಪ್ ಚಾಟ್‌ಗಳು ಮತ್ತು ಹಣಕಾಸಿನ ದಾಖಲೆಗಳು ಅವರನ್ನು ಸಂಚು ರೂಪಿಸಿದವರಲ್ಲಿ ಪ್ರಮುಖರೆಂದು ವಾದಿಸಿ, ಐದು ದಿನಗಳ ಕಾಲ ಕವಿತಾ ಅವರನ್ನು ಸಿಬಿಐ ಕಸ್ಟಡಿಗೆ ಕೋರಿತ್ತು. ಇದನ್ನೂ ಓದಿ: 370 ವಿಧಿಯನ್ನು ರದ್ದುಪಡಿಸಿದ್ದಕ್ಕೆ ಅಂಬೇಡ್ಕರ್ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು: ಮೋದಿ