ವಿಧವೆ ನಾದಿನಿಯ ಮುಖಕ್ಕೆ ಆ್ಯಸಿಡ್ ಎರಚಿದ ಪಾಪಿ ಬಾವ

Public TV
1 Min Read
Acid Attack

ಮಂಗಳೂರು: ನಾದಿನಿಯ ಮುಖಕ್ಕೆ ಬಾವನೇ ಆ್ಯಸಿಡ್ ಎರಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಂಬಾಳದಲ್ಲಿ ನಡೆದಿದೆ.

ಆ್ಯಸಿಡ್ ಎರಿಚಿದ ಆರೋಪಿಯನ್ನು ಕೊಂಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ(55) ಎಂದು ಗುರುತಿಸಲಾಗಿದೆ. ಎಲ್‍ಐಸಿ ಏಜೆಂಟ್ ಜಯಾನಂದ ತನ್ನ ತಮ್ಮನ ಪತ್ನಿ ಸ್ವಪ್ನಾ(35) ಮೇಲೆ ಆ್ಯಸಿಡ್ ಎರಚಿದ್ದಾನೆ. ಸ್ವಪ್ನಾ ಅವರ ಪತಿ ರವಿ ಮೃತಪಟ್ಟಿದ್ದು, ತಮ್ಮ ಮೂವರು ಹೆಣ್ಣು ಮಕ್ಕಳ ಜೊತೆ ಸ್ವಪ್ನಾ ವಾಸವಿದ್ದಾರೆ. ಜಯಾನಂದ ಹಾಗೂ ಸ್ವಪ್ನಾ ಅವರ ಮಧ್ಯೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಿತ್ತು. ಅದು ಭೂ ವಿವಾದಕ್ಕೆ ತಿರುಗಿ ಇವರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಈ ವಿಚಾರಕ್ಕೆ ಸ್ವಪ್ನಾ ಮೇಲೆ ಜಯಾನಂದ ಕೋಪಗೊಂಡಿದ್ದನು. ಸ್ವಪ್ನಾ ಅವರ ಮೇಲಿನ ಕೋಪಕ್ಕೆ ಅವರ ಮುಖಕ್ಕೆ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಎಸೆದಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯ ಜೊತೆಗಿದ್ದ ಸ್ವಪ್ನಾ ಅವರ ಮಗಳಿಗೂ ಆ್ಯಸಿಡ್ ಸಿಡಿದಿದ್ದು, ತಾಯಿ ಹಾಗೂ ಮಗು ಇಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article