ಮಡಿಕೇರಿ: ಕೋಳಿ ಕಾಲು ಸುಡದಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಾಮೈದುನನನ್ನು ಬಾವ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ (Virajpete) ತಾಲ್ಲೂಕಿನ ಕದೆಮುಳ್ಳೂರು ತೋರ ಗ್ರಾಮದಲ್ಲಿ ನಡೆದಿದೆ.
ಮೃತನನ್ನು 25 ವರ್ಷದ ಮಂಜು ಹಾಗೂ ಆರೋಪಿಯನ್ನು 34 ವರ್ಷದ ಅಭಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಗಾಯಕ ಪಿ.ಜಯಚಂದ್ರನ್ ಹಾಡಿದ್ದ ಕನ್ನಡದ ಸೂಪರ್ ಹಿಟ್ ಹಾಡುಗಳಿವು..
ಮೃತ ಮಂಜು ತೋರ ಗ್ರಾಮದ ತೋಟದ ಅಚ್ಚಯ್ಯ ಎಂಬವರ ಲೈನ್ ಮನೆಯಲ್ಲಿ ವಾಸವಿದ್ದ. ಮೃತ ಮಂಜು ತಂಗಿ ಕಾವ್ಯಳನ್ನು ಆರೋಪಿ ಅಭಿ ವಿವಾಹವಾಗಿದ್ದ. ಜ.07 ಮಂಗಳವಾರದಂದು ತೋಟದ ಕಾರ್ಮಿಕರಿಗೆ ಮುಂಗಡ ಸಂಬಳವನ್ನು ನೀಡಲಾಗಿತ್ತು. ಅಂದು ಸಂಜೆ ಮಂಜು ಮತ್ತು ಅರೋಪಿ ಅಭಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದರು. ತೋಟದ ಮಾಲೀಕರ ನಿರ್ದೇಶನದ ಮೇರೆಗೆ ರಾತ್ರಿ ಕಾಫಿ ಕಣದಲ್ಲಿ ಕಾವಲು ಕಾಯುವಂತೆ ತಿಳಿಸಿದ್ದರು. ಈ ವೇಳೆ ಕಾಫಿ ಕಣದಲ್ಲಿ ಕೋಳಿ ಕಾಲು ಸುಡಲು ಇಬ್ಬರು ಮುಂದಾಗಿದ್ದರು. ಆರೋಪಿ ಮೃತ ಮಂಜುಗೆ ನೀನು ಕೋಳಿ ಕಾಲು ಸುಡು, ನಾನು ಮನೆಯಿಂದ ಇಬ್ಬರಿಗೂ ಊಟ ತರುತ್ತೇನೆ ಎಂದು ತಿಳಿಸಿ ಸ್ಥಳದಿಂದ ತೆರಳಿದ್ದ.
ಮನೆಯಿಂದ ಅಭಿ ಹಿಂದಿರುಗಿದಾಗ ಮಂಜು ಕೋಳಿ ಕಾಲು ಸುಡದೆ ಏಕಾಂತದಲ್ಲಿ ಕುಳಿತಿದ್ದ. ಇದನ್ನು ಕಂಡು ಕೋಪಗೊಂಡ ಅಭಿ ಜಗಳಕ್ಕೆ ಮುಂದಾಗಿದ್ದ. ಈ ವೇಳೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ತನ್ನ ಬಳಿಯಿದ್ದ ಕತ್ತಿಯಿಂದ ಆರೋಪಿ ಮಂಜುವಿನ ತಲೆ ಭಾಗವನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ. ಪರಿಣಾಮ ಅಧಿಕ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಲೆ ಮಾಡಿದ ಬಳಿಕ ಮನೆಯಲ್ಲಿದ್ದ ಡಿಸೇಲ್ ತಂದು, ಮೃತದೇಹವನ್ನು ಅಭಿ ಸುಟ್ಟು ಹಾಕಿದ್ದಾನೆ. ಇದರಿಂದ ಸೊಂಟದ ಮೇಲಿನ ಭಾಗವು ಸಂಪೂರ್ಣ ಸುಟ್ಟು ಕರಕಲಾಗಿದೆ. ಯಾರಿಗೂ ಗೊತ್ತಾಗಬಾರದು ಎಂದು ಮೃತದೇಹವನ್ನು ಹುಲ್ಲಿನಲ್ಲಿ ಅಡುಗಿಸಿಟ್ಟಿದ್ದ. ಬಳಿಕ ಮನೆಗೆ ಹಿಂದಿರುಗಿದಾಗ ಮನೆಯವರು ಮಂಜು ಎಲ್ಲಿ ಎಂದು ಕೇಳಿದಾಗ, ಗೊತ್ತಲ್ಲದಂತೆ ನಾಟಕವಾಡಿ ಮಲಗಿದ್ದ.
ಮನೆಯವರು ರಾತ್ರಿಯೆಲ್ಲಾ ಮಂಜುಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಮುಂಜಾನೆಯು ತೋಟದಲ್ಲಿ ಹುಡುಕಾಟ ನಡೆಸಿದ್ದಾರೆ. ಕೊನೆಯಲ್ಲಿ ಜ.08 ರಂದು ತೋಟದ ಮಾಲೀಕರು ಮತ್ತು ಮೃತನ ತಂದೆ ಮಣಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಜು ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಕೈಗೊಂಡು ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಾರೆ.ಇದನ್ನೂ ಓದಿ: ಸರ್ಕಾರಿ ನೌಕರರ ಆಸ್ತಿ ವಿವರ ಬಹಿರಂಗಕ್ಕೆ `ಲೋಕಾ’ದಿಂದ ಸಿಎಸ್‍ಗೆ ಪತ್ರ – ತಿರುಗಿಬಿದ್ದ ನೌಕರರು
ಆರೋಪಿ ಅಭಿಯ ಮೇಲೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಬಿಎನ್‌ಎಸ್ ಸೆಕ್ಷನ್ ಅನ್ವಯ ಕೊಲೆ ಪ್ರಕರಣ ದಾಖಲಿಸಿದ್ದಾರೆ.