– ಆಹಾರ ಸಂಸ್ಕರಣಾ ಸಚಿವರಿಗೆ ಮನವಿ
ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು ಅಡಿಕೆಗೆ (Arecanut) ನಿಗದಿಪಡಿಸಿರುವ ತೇವಾಂಶ ಮಿತಿಯನ್ನು ಸಡಿಲಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ (Brijesh Chowta) ಅವರು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ (Chirag Paswan) ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಎಫ್‌ಎಸ್‌ಎಸ್‌ಎಐ ಸಂಸ್ಥೆಯು ಅಡಿಕೆಗೆ ನಿಗದಿಪಡಿಸಿರುವ ಈ ತೇವಾಂಶ ಮಿತಿಯನ್ನು ಗಂಭೀರ ಸಮಸ್ಯೆಯಾಗಿ ಸಂಸದರು ಪರಿಗಣಿಸಿದ್ದಾರೆ. ಇದರಿಂದ ದೆಹಲಿಯಲ್ಲಿ ಸಚಿವರನ್ನು ಖುದ್ದು ಭೇಟಿಯಾಗಿ ಚರ್ಚಿಸಿದ್ದಾರೆ. ಈ ವೇಳೆ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಅಡಿಕೆ ಬೆಳಗಾರರರಿಗೆ ಈ ರೀತಿಯ ತೇವಾಂಶ ಮಿತಿ ಹೇರಿಕೆಯು ಸಾಕಷ್ಟು ತೊಂದರೆಯುಂಟು ಮಾಡುತ್ತಿರುವುದನ್ನು ಮನವರಿಕೆ ಮಾಡಿದ್ದಾರೆ. ಇದನ್ನೂ ಓದಿ: ನವ ಮಂಗಳೂರು ಬಂದರು ಮೇಲ್ದರ್ಜೆಗೇರಿಸಲು 438.29 ಕೋಟಿ ರೂ. ಅನುಮೋದನೆ
ದಕ್ಷಿಣ ಕನ್ನಡದ ಕೃಷಿ ಆಧಾರಿತ ಆರ್ಥಿಕತೆಯಲ್ಲಿ ಅಡಿಕೆ ಬೆಳೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ನಮ್ಮ ಪ್ರದೇಶದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು, ಸಹಕಾರ ಸಂಘಗಳು ಹಾಗೂ ಸ್ಥಳೀಯ ವರ್ತಕರು ತಮ್ಮ ಜೀವನೋಪಾಯಕ್ಕಾಗಿ ಅಡಿಕೆ ಬೆಳೆಯನ್ನು ಅವಲಂಬಿಸಿದ್ದಾರೆ. ಆದರೆ ಎಫ್‌ಎಸ್‌ಎಸ್‌ಎಐನ ಮಾನದಂಡದ ಅಡಿಯಲ್ಲಿ ಅಡಿಕೆಯಲ್ಲಿರಬೇಕಾದ ಗರಿಷ್ಠ ತೇವಾಂಶದ ಪ್ರಮಾಣವನ್ನು ಶೇ.7ಕ್ಕೆ ನಿಗದಿಪಡಿಸಿರುವುದರಿಂದ ಅಡಿಕೆ ಬೆಳೆಗಾರರನ್ನು ಅಡಕತ್ತರಿಯಲ್ಲಿ ಸಿಲುಕಿಸುವಂತೆ ಮಾಡಿದೆ. ಕರಾವಳಿಯಂತಹ ಅತಿ ಹೆಚ್ಚು ಆರ್ದ್ರತೆ ಇರುವ ಪ್ರದೇಶಗಳಲ್ಲಿ ಅಡಿಕೆಯನ್ನು ಪ್ರಮುಖವಾಗಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.

ಇಂತಹ ನೈಸರ್ಗಿಕ ಪರಿಸ್ಥಿತಿಗಳಲ್ಲಿ ಅಡಿಕೆ ತೇವಾಂಶದ ಮಟ್ಟವನ್ನು ಶೇ.11ಕ್ಕಿಂತ ಕಡಿಮೆ ಪ್ರಮಾಣಕ್ಕೆ ನಿಗದಿಪಡಿಸಿರುವುದರಿಂದ ರೈತರಿಗೆ ತೀವ್ರ ಸಮಸ್ಯೆ ಸೃಷ್ಟಿಸುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಈ ರೀತಿಯ ಕಠಿಣ ನಿಯಮಗಳಿಂದಾಗಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಿಕೆಯನ್ನು ತಿರಸ್ಕರಿಸುವುದು ಅಥವಾ ಕಡಿಮೆ ದರ್ಜೆಯದೆಂದು ಪರಿಗಣಿಸಲಾಗುತ್ತಿದೆ. ಇದು ರೈತರಿಗೆ ಮತ್ತು ಸಹಕಾರ ಸಂಘಗಳಿಗೆ ಭಾರೀ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಮಾರುಕಟ್ಟೆಯಲ್ಲಿ ಸದ್ಯಕ್ಕೆ ಏಕರೂಪದ ಅಡಿಕೆ ತೇವಾಂಶ ಪರೀಕ್ಷಾ ವ್ಯವಸ್ಥೆ ಇಲ್ಲದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಂಸದರು, ಸರಿಯಾದ ಅಡಿಕೆ ತೇವಾಂಶ ಪ್ರಮಾಣ ಪರೀಕ್ಷಾ ವ್ಯವಸ್ಥೆ ಇಲ್ಲದಿರುವುದರಿಂದ ಮನಬಂದಂತೆ ಬೆಲೆಯನ್ನು ನಿಗದಿ ಮಾಡಿ ರೈತರನ್ನು ಶೋಷಣೆಗೆ ಒಳಪಡಿಸುವ ಅಪಾಯವೂ ಇದೆ. ಅಲ್ಲದೇ ಅಡಿಕೆಯನ್ನು ಹಣ್ಣು ಮತ್ತು ಬೀಜಗಳು ವರ್ಗದಡಿ ಸೇರಿಸಿರುವುದು ಕೂಡ ತಾಂತ್ರಿಕವಾಗಿ ಸರಿಯಾದ ಕ್ರಮವಲ್ಲ. ಅದರಲ್ಲಿನ ಕಡಿಮೆ ಕೊಬ್ಬಿನ ಅಂಶ ಹಾಗೂ ಧಾನ್ಯ/ಬೇಳೆಗಳಿಗೆ ಹತ್ತಿರದ ಸ್ವಭಾವವನ್ನು ಗಮನಿಸಿದರೆ ಈ ರೀತಿಯ ಅವೈಜ್ಞಾನಿಕವಾದ ವರ್ಗೀಕರಣದ ಬಗ್ಗೆಯೂ ಮರುಪರಿಶೀಲನೆಗೆ ಒಳಪಡಬೇಕಾದ ಅಗತ್ಯೆಯಿದೆ ಎಂದು ಹೇಳಿದ್ದಾರೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅಡಿಕೆಗೆ ಆಹಾರ ಸುರಕ್ಷತಾ ಪ್ರಾಧಿಕಾರವು ಅಡಿಕೆಗೆ ಈಗಾಗಲೇ ನಿಗದಿಪಡಿಸಿರುವ ತೇವಾಂಶ ಮಿತಿಯನ್ನು ಶೇ.7ರಿಂದ ಶೇ.11ಕ್ಕೆ ಹೆಚ್ಚಿಸಬೇಕು. ಜತೆಗೆ ಅಡಿಕೆಯನ್ನು ಸರಿಯಾದ ಹಾಗೂ ವೈಜ್ಞಾನಿಕ ರೀತಿಯ ಬೆಳೆಗಳ ವರ್ಗೀಕರಣದ ಪಟ್ಟಿಯಲ್ಲಿ ಸೇರಿಸಬೇಕು. ಅಡಿಕೆ ತೇವಾಂಶ ಪ್ರಮಾಣ ಪರೀಕ್ಷೆಗೂ ಸರಿಯಾದ ಹಾಗೂ ಪಾರದರ್ಶಕವಾದ ಮಾನದಂಡಗಳನ್ನು ರೂಪಿಸಬೇಕು. ಆ ಮೂಲಕ, ಅಡಿಕೆ ಬೆಳಗಾರರಿಗೆ ಬೆಳೆ ಕಟಾವು ನಂತರ ಅವುಗಳನ್ನು ಒಣಗಿಸಲು ಹಾಗೂ ದಾಸ್ತಾನು ಮಾಡುವುದಕ್ಕೆ ಹೆಚ್ಚು ವೈಜ್ಞಾನಿಕವಾದ ಮೂಲಸೌಕರ್ಯ ಕೂಡ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಾದೇಶಿಕ ಅಥವಾ ಭೌಗೋಳಿಕ ಅಗತ್ಯಗಳಿಗನುಗುಣವಾಗಿ ನಿಯಮಗಳನ್ನು ರೂಪಿಸುವುದರಿಂದ ರೈತರಿಗೆ ಹೆಚ್ಚಿನ ಅನುಕೂಲ ಹಾಗೂ ಬೆಂಬಲ ದೊರೆಯುತ್ತದೆ. ಈ ರೀತಿಯ ಕ್ರಮಗಳು ಸಮಗ್ರ ಕೃಷಿ ಪ್ರಗತಿ ಹಾಗೂ ‘ವಿಕಸಿತ ಭಾರತ’ದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಅತ್ಯಗತ್ಯ ಎಂದು ಕ್ಯಾ. ಚೌಟ ಅವರು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು, ಅಡಿಕೆ ಬೆಳೆಗಾರರಿಗೆ ಎದುರಾಗಿರುವ ಈ ತೇವಾಂಶ ಮಿತಿ ನಿಗದಿ ಸಮಸ್ಯೆ ಮತ್ತು ಸಲಹೆಗಳನ್ನು ಕೂಲಂಕುಷವಾಗಿ ಪರಿಶೀಲಿಸುವುದಾಗಿ ಕ್ಯಾ. ಚೌಟ ಅವರಿಗೆ ಭರವಸೆ ನೀಡಿದ್ದಾರೆ.
ಈ ಬಗ್ಗೆ ಕಾಂಪ್ಕೋ ಸಂಸ್ಥೆ ಸೇರಿದಂತೆ ಹಲವು ಅಡಿಕೆ ಬೆಳೆಗಾರರ ನಿಯೋಗ ಕೂಡ ಭೇಟಿ ಮಾಡಿ ಮನವಿ ಕೊಟ್ಟಿದ್ದಾರೆ. ಹೀಗಾಗಿ, ಶೀಘ್ರದಲ್ಲೇ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ(ಎಫ್‌ಎಸ್‌ಎಸ್‌ಎಐ) ಉನ್ನತ ಮಟ್ಟದ ಅಧಿಕಾರಿಗಳನ್ನು ಕೂಡ ಭೇಟಿ ಮಾಡಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು. ಇದನ್ನೂ ಓದಿ: ಕೈಚೀಲ ಖರೀದಿ ಅಕ್ರಮ – ರೋಹಿಣಿ ಸಿಂಧೂರಿಗೆ ಸಂಕಷ್ಟ

