ಮಂಗಳೂರು: ‘ತೂಗುಸೇತುವೆಗಳ ಸರದಾರ’, ‘ಸುಳ್ಯದ ವಿಶ್ವೇಶ್ವರಯ್ಯ’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ((Padma Shri Awardee) ಎಂಜಿನಿಯರ್ ಡಾ. ಗಿರೀಶ್ ಭಾರದ್ವಾಜ್ (Girish Bharadwaj) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಿರೀಶ್ ಭಾರದ್ವಾಜ್ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಮುಂಜಾನೆ ತೀವ್ರ ಅಸ್ವಸ್ಥಗೊಂಡ ಬಳಿಕ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ತೂಗುಸೇತುವೆಗಳ ಸರದಾರ:
ಗ್ರಾಮೀಣ ಭಾರತದ ಅಭಿವೃದ್ಧಿಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಡಾ. ಗಿರೀಶ್ ಭಾರದ್ವಾಜ್ ಅವರು ದೇಶದಾದ್ಯಂತ 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿ ಲಕ್ಷಾಂತರ ಜನರ ಬದುಕಿಗೆ ಸಂಪರ್ಕ ಕಲ್ಪಿಸಿದ ಸಾಧಕರಾಗಿದ್ದರು. ಕಡಿಮೆ ವೆಚ್ಚದಲ್ಲಿ, ಕಡಿಮೆ ಅವಧಿಯಲ್ಲಿ ಸುರಕ್ಷಿತ ತೂಗುಸೇತುವೆಗಳನ್ನು ನಿರ್ಮಿಸುವ ತಮ್ಮ ವಿಶಿಷ್ಟ ತಂತ್ರಜ್ಞಾನದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದ ಭಾರದ್ವಾಜ್ ಅವರು ಆರಂಭದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವ ಕನಸು ಕಂಡಿದ್ದರು. ಬಳಿಕ ಆ ಕನಸಿಗೆ ವಿದಾಯ ಹೇಳಿ ಗ್ರಾಮೀಣ ಜನರ ಬದುಕನ್ನು ಸುಗಮಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಸೇತುವೆ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟರು. ‘ಆಯಶಿಲ್ಪ ಇಂಜಿನಿಯರಿಂಗ್ ವರ್ಕ್ಸ್’ ಸ್ಥಾಪಿಸಿದ ಅವರು, ದೂರದ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ನೂರಾರು ಸೇತುವೆಗಳನ್ನು ನಿರ್ಮಿಸಿ ಜನಮನ ಗೆದ್ದರು.
ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅವರ ತೂಗುಸೇತುವೆಗಳು ನಿರ್ಮಾಣಗೊಂಡಿವೆ. ಸಾಮಾನ್ಯ ಕಾಂಕ್ರೀಟ್ ಸೇತುವೆ ನಿರ್ಮಾಣಕ್ಕೆ ಮೂರು ವರ್ಷಗಳಷ್ಟು ಸಮಯ ಬೇಕಾಗುವ ಸ್ಥಳಗಳಲ್ಲಿ, ಕೇವಲ ಮೂರು ತಿಂಗಳೊಳಗೆ ಕಡಿಮೆ ವೆಚ್ಚದಲ್ಲಿ ತೂಗುಸೇತುವೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಸಾಂಪ್ರದಾಯಿಕ ಸೇತುವೆಗಳ ನಿರ್ಮಾಣ ವೆಚ್ಚದ ಕೇವಲ ಹತ್ತನೇ ಒಂದು ಭಾಗದಲ್ಲಿ ಸೇತುವೆಗಳನ್ನು ನಿರ್ಮಿಸುವ ಅವರ ತಂತ್ರಜ್ಞಾನ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸೇರಿದಂತೆ ಮಂಗಳೂರು ಹಾಗೂ ರಾಜ್ಯದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅವರು ನಿರ್ಮಿಸಿದ ತೂಗುಸೇತುವೆಗಳು ಸಾವಿರಾರು ಕುಟುಂಬಗಳ ಜೀವನವನ್ನು ಸುಲಭಗೊಳಿಸಿವೆ. ಸುಳ್ಯದ ಮಂಡೆಕೋಲಿನಲ್ಲಿ ನಿರ್ಮಾಣಗೊಂಡ ಅವರ 100ನೇ ತೂಗುಸೇತುವೆ ವಿಶೇಷ ಗಮನ ಸೆಳೆದಿತ್ತು. ಈ ಸಾಧನೆಯಿಂದ ಗ್ರಾಮಸ್ಥರು ಅವರನ್ನು ಪ್ರೀತಿಯಿಂದ ‘ಸುಳ್ಯದ ವಿಶ್ವೇಶ್ವರಯ್ಯ’ ಹಾಗೂ ‘ಸೇತುವೆಗಳ ಸರದಾರ’ ಎಂದು ಕರೆಯುತ್ತಿದ್ದರು.
ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2017ರಲ್ಲಿ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಎಂಜಿನಿಯರಿಂಗ್ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿದ ಅಪರೂಪದ ತಾಂತ್ರಿಕ ಸಾಧಕರಾಗಿ ಅವರು ಗುರುತಿಸಿಕೊಂಡಿದ್ದರು.
ಸಿಎಂ ಡಿ.ಕೆ. ಶಿವಕುಮಾರ್ ಸಂತಾಪ:
ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, ‘ತೂಗುಸೇತುವೆಗಳ ಸರದಾರ’, ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ತೀವ್ರ ಬೇಸರ ತಂದಿದೆ. ಅವರ ಅಗಲಿಕೆಯಿಂದ ರಾಜ್ಯವು ಅಪರೂಪದ ತಾಂತ್ರಿಕ ಸಾಧಕನೊಬ್ಬನನ್ನು ಕಳೆದುಕೊಂಡಂತಾಗಿದೆ.
ದೇಶದಾದ್ಯಂತ 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿದ್ದ ಗಿರೀಶ್ ಭಾರದ್ವಾಜ್ ಅವರು, ಕಡಿದಾದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಜನರ ಬದುಕನ್ನು ಸುಗಮಗೊಳಿಸಿದ್ದರು. ಇವರ ಈ ನಿಸ್ವಾರ್ಥ ತಂತ್ರಜ್ಞಾನ ಸೇವೆಗೆ ಮನಸೋತ ಗ್ರಾಮಸ್ಥರು ಇವರನ್ನು ಪ್ರೀತಿಯಿಂದ ‘ಸುಳ್ಯದ ವಿಶ್ವೇಶ್ವರಯ್ಯ’ ಎಂದೇ ಕರೆಯುತ್ತಿದ್ದರು.
ಡಾ. ಗಿರೀಶ್ ಭಾರದ್ವಾಜ್ ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
