ಚಿಕ್ಕಬಳ್ಳಾಪುರ: ಕಳೆದ ಒಂದು ವರ್ಷದ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಮೇಲ್ಸೇತುವೆಯೊಂದು ಇಂದು ದಿಢೀರ್ ಕುಸಿದಿದ್ದು, ಜನರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.
ಬೆಂಗಳೂರು ಹಿಂದೂಪುರ ಮಾರ್ಗದ ಬಾಶೆಟ್ಟಿಹಳ್ಳಿ ಬಳಿ ಇರುವ ಮೇಲ್ಸೇತುವೆ ಇಂದು ಮಧ್ಯಾಹ್ನ ದಿಢೀರ್ ಕುಸಿದಿದೆ. ಈ ದೃಶ್ಯ ಕಂಡು ಎಚ್ಚೆತ್ತ ಸ್ಥಳೀಯರು ಸೇತುವೆಗೆ ಎರಡು ಕಡೆಯಲ್ಲೂ ಕಲ್ಲುಗಳನ್ನಿಟ್ಟು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ. ಸ್ವಲ್ಪ ಸ್ವಲ್ಪವಾಗಿ ಸೇತುವೆ ಕುಸಿಯಲು ಆರಂಭಿಸಿದ್ದು, ಯಾವುದೇ ಕ್ಷಣದಲ್ಲಿ ಮೇಲ್ಸೇತುವೆ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇದೆ.
ಉದ್ಘಾಟನೆಯಾಗಿ ಒಂದು ವರ್ಷವಷ್ಟೇ ಆಗಿದೆ, ಆಗಲೇ ಈ ದುಸ್ಥಿತಿಗೆ ಸೇತುವೆ ತಲುಪಿದೆ. ಉತ್ತಮ ಗುಣಮಟ್ಟದ ಸೇತುವೆ ನಿರ್ಮಿಸುವ ಬದಲು ಕಳಪೆ ಮಟ್ಟದ ಸೇತುವೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಜೊತೆಗೆ ಇದರಿಂದ ಆನಾಹುತ ಸಂಭವಿಸುವ ಮೊದಲು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.