ಪಾಟ್ನಾ: ಮದುವೆಯಲ್ಲಿ ವಧುವಿಗೆ ವರ ಹಾರ ಹಾಕಿದ ಬೆನ್ನೆಲ್ಲೆ ಪ್ರಿಯಕರ ಸಿಂಧೂರ ಹಚ್ಚಿದ (ಬೈತಲೆಗೆ ಕುಂಕುಮ) ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ವೇದಿಕೆ ಮೇಲೆ ವಧು ಹಾಗೂ ವರ ಹಾರ ಬದಲಾಯಿಸಿಕೊಳ್ಳಲು ನಿಂತಿದ್ದರು. ಆಗ ತಕ್ಷಣ ವಧುವಿನ ಪ್ರಿಯಕರ ತನ್ನ ನಾಲ್ಕೈದು ಸ್ನೇಹಿತರ ಜೊತೆ ವೇದಿಕೆ ಹತ್ತಿ ಸಿಂಧೂರ ಹಾಕಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ಜನರು ಒಂದು ಕ್ಷಣ ದಂಗಾದರು.
ಪ್ರಿಯಕರ ವಧುವಿನ ಹಣೆಗೆ ಸಿಂಧೂರ ಹಾಕಿದ ನಂತರ ಮದುವೆ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ನಂತರ ಗ್ರಾಮದ ಹಿರಿಯರು ಬಂದು ವಿಚಾರಿಸಿದಾಗ ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ನಂತರ ವಧುವನ್ನು ತನ್ನ ಪ್ರಿಯಕರನ ಜೊತೆ ಗ್ರಾಮಸ್ಥರು ಕಳುಹಿಸಿಕೊಟ್ಟಿದ್ದಾರೆ ಅಂತಾ ವರದಿಯಾಗಿದೆ.
ವಧುವಿನ ಕುಟುಂಬದವರು ಮದುವೆಯನ್ನು ಬೇರೆ ಕಡೆ ನಿಶ್ಚಯ ಮಾಡಿದ್ದು, ಮದುವೆಯ ಶಾಸ್ತ್ರ ಸಂಪ್ರದಾಯಗಳೆಲ್ಲ ನೆರವೇರಿತ್ತು. ವರ ಮೆರವಣಿಗೆಯಿಂದ ನೇರವಾಗಿ ಹಾರ ಬದಲಾಯಿಸಿಕೊಳ್ಳಲು ವೇದಿಕೆ ಮೇಲೆ ಬಂದರು. ವರ ವಧುವಿಗೆ ಹಾರ ಹಾಕುವ ಸಮಯದಲ್ಲೇ ಆಕೆಯ ಪ್ರಿಯಕರ ವೇದಿಕೆ ಮೇಲೆ ಹತ್ತಿ ಯುವತಿಗೆ ಸಿಂಧೂರ ಹಚ್ಚಿದ್ದಾನೆ.
ಈ ಘಟನೆ ನಡೆದ ನಂತರ ಮದುವೆ ಮನೆ ಗಲಾಟೆಗಳು ಆರಂಭವಾಗಿದೆ. ವಧುವಿನ ಕುಟುಂಬಸ್ಥರು ಎಲ್ಲರೂ ಸೇರಿ ಪ್ರಿಯಕರ ಹಾಗೂ ಆತನ ಸ್ನೇಹಿತರಿಗೆ ಥಳಿಸಿದ್ದಾರೆ. ಘಟನೆಯಲ್ಲಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡರು. ಇದನ್ನು ನೋಡಿದ ವಧು ತನ್ನ ಪ್ರಿಯಕರನನ್ನು ಬಿಟ್ಟುಬಿಡಿ ಎಂದು ಜೋರಾಗಿ ಕಿರುಚಲು ಶುರು ಮಾಡಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.
ವಧು ಹಾಗೂ ಆಕೆಯ ಪ್ರಿಯಕರನ ಬಗ್ಗೆ ವಿಚಾರಿಸಿದ್ದಾಗ ನಾವು ಮೂರು ವರ್ಷದಿಂದ ಪ್ರೀತಿಸುತ್ತಿದ್ದೇವೆ. ಈ ವಿಚಾರ ನನ್ನ ತಂದೆ- ತಾಯಿಗೂ ಗೊತ್ತಿತ್ತು. ಆದರೆ ಅವರು ಬಲವಂತವಾಗಿ ನನ್ನ ಮದುವೆಯನ್ನು ಮಾಡಲು ನಿರ್ಧರಿಸಿದ್ದರು. ನಂತರ ನನಗೆ ಹೆದರಿಸಿ ನನ್ನ ಮದುವೆಯನ್ನು ಬೇರೊಬ್ಬ ಜೊತೆ ನಿಶ್ಚಯಿಸಿದ್ದರು ಎಂದು ವಧು ಗ್ರಾಮಸ್ಥರ ಮುಂದೆ ಹೇಳಿಕೆ ನೀಡಿದ್ದಾಳೆ.
ವಧು ಹಾಗೂ ಆಕೆಯ ಪ್ರಿಯಕರ ಫೋಟೋವನ್ನು ನೋಡಿದ ವರ ಮತ್ತೊಮ್ಮೆ ವಧುವಿನ ನಿರ್ಧಾರವನ್ನು ಕೇಳಿದ್ದನು. ಆಗ ವಧು ತನ್ನ ಪ್ರಿಯಕರನ ಜೊತೆ ಹೋಗುವುದಾಗಿ ಹಠ ಮಾಡುತ್ತಿದ್ದಳು. ಆಗ ವರ ಮೆರವಣಿಗೆ ಮೂಲಕ ಹಿಂದಿರುಗಲು ನಿರ್ಧರಿಸಿದ್ದರು. ನಂತರ ಗ್ರಾಮಸ್ಥರು ಹಾಗೂ ಪೋಷಕರು ವಧುವನ್ನು ತನ್ನ ಪ್ರಿಯಕರನ ಜೊತೆ ಮದುವೆ ಮಾಡಿ ಕಳುಹಿಸಿಕೊಟ್ಟರು ಎಂದು ವರದಿಯಾಗಿದೆ.