ಲಕ್ನೋ: ಶೌಚಕ್ಕೆ ತೆರಳುವುದಾಗಿ ಹೇಳಿ ಪ್ರಿಯಕರನ ಜೊತೆ ವಧು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಕೊತವಾಲಿ ಕ್ಷೇತ್ರದ ಗುರಖಶ್‍ಗಂಜ್ ಎಂಬಲ್ಲಿ ನಡೆದಿದೆ.
ಸಂಜೆ ವರನ ಕಡೆಯವರು ಮದುವೆ ಮನೆಗೆ ಆಗಮಿಸಿದ್ದಾರೆ. ವರ ಬಂದ ಕೂಡಲೇ ವಧುವಿನ ಪೋಷಕರು ಸಂಭ್ರಮದಿಂದ ಎಲ್ಲರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ. ಸ್ವಾಗತದ ಬಳಿಕ ಮದುವೆಯ ಶಾಸ್ತ್ರಗಳು ಕೂಡ ಆರಂಭವಾಗಿದ್ದವು. ವಧು-ವರ ಇಬ್ಬರು ಸಹ ಹಾರ ಬದಲಾಯಿಸಿಕೊಂಡಿದ್ದಾರೆ. ಇನ್ನೇನು ಸಪ್ತಪದಿ ತುಳಿಯುವ ಮುನ್ನ ವಧು ಶೌಚದ ನೆಪ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ವಧುವಿನ ಮನೆಗೆ ಬಂದಿದ್ದ ವರ ಮಂಟಪದಲ್ಲಿ ಕಾಯುತ್ತಾ ಕುಳಿತಿದ್ದಾನೆ. ವರನೊಂದಿಗೆ ಹಾರ ಬದಲಾಯಿಸಿಕೊಂಡ ವಧು ಶೌಚಕ್ಕೆ ಹೋಗಬೇಕೆಂದು ಅಲ್ಲಿಯ ಚಿಕ್ಕ ಹೆಣ್ಣು ಮಕ್ಕಳ ಜೊತೆ ತೆರಳಿದ್ದಾಳೆ. ಕೆಲವು ಸಮಯದ ಬಳಿಕ ಮಕ್ಕಳು ವಾಪಸ್ಸಾದ್ರೆ ವಧು ಅಲ್ಲಿಂದಲೇ ತನ್ನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಇತ್ತ ವಧು ನಾಪತ್ತೆ ವಿಷಯ ತಿಳಿದ ಕೂಡಲೇ ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗ್ರಾಮದ ಇಬ್ಬರು ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ. ವರನ ಕಡೆಯವರು ವಧು ಪರಾರಿಯಾಗಿದ್ದರಿಂದ ಮದುವೆ ಕ್ಯಾನ್ಸಲ್ ಮಾಡಿ ಹಿಂದಿರುಗಿದ್ದಾರೆ.
ಯುವತಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಯುವತಿಗೆ ಆಕೆಯ ಪೋಷಕರು ಬಲವಂತವಾಗಿ ಮದುವೆ ಮಾಡಿಸಲು ಮುಂದಾಗಿದ್ದಾರೆ. ವರನ ಪೋಷಕರು ಬೆಳಗ್ಗೆವರೆಗೂ ಕಾದು ತಮ್ಮ ಊರಿಗೆ ಮರಳಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.