ಉಡುಪಿ: ಜಿಲ್ಲೆಯ ಕೆಲವು ಮತಗಟ್ಟೆಗಳು ಮದುವೆ ಮನೆಯಂತಾಗಿತ್ತು. ಬೂತ್ ಆಸುಪಾಸಿನಲ್ಲಿ ಸಿಂಗಾರಗೊಂಡ ಕಾರುಗಳು ಓಡಾಡುತ್ತಿದ್ದವು. ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ಹಾಗೂ ಮದುವೆಯ ನಂತರ ನವ ವಧು ವರರು ದೇಶದ ಭವಿಷ್ಯದ ಬಗ್ಗೆ ಕನಸು ಹೊತ್ತು ಮತಗಟ್ಟೆಗಳಿಗೆ ಮತ ಹಾಕಿ ಬಂದಿದ್ದರು. ತಲೆತುಂಬಾ ಹೂವು, ಕೈ ತುಂಬಾ ಮದರಂಗಿ ಹಾಕಿಕೊಂಡು ಸಿಂಗಾರಗೊಂಡ ವಧು ಹಾಗೂ ಮದುವೆಗೆ ರೆಡಿಯಾಗಿ ಬಂದಿದ್ದ ವರರು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಿ ಸಾರ್ಥಕತೆ ಮೆರೆದರು.
ಉಡುಪಿಯ ಮಲ್ಪೆ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಯಲ್ಲಿ ಸ್ಥಳೀಯ ನಿವಾಸಿ ದೀಪಾ ಮತದಾನ ಮಾಡಿದರು. ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ಹಸೆಮಣೆ ಏರಬೇಕಾಗಿದ್ದ ದೀಪಾ ಮತಚಲಾಯಿಸಿದ ನಂತರ ಮದುವೆ ಮನೆಗೆ ಹೋದರು. ಅಲ್ಲದೆ ಕಟಪಾಡಿ ಕೋಟೆ ಪಂಚಾಯತ್ ವ್ಯಾಪ್ತಿಯಲ್ಲಿ ಅಲ್ಲಿಯ ಸ್ಥಳೀಯ ನಿವಾಸಿ ಶೃತಿ ಮದುವಣಗಿತ್ತಿಯಾಗಿಯೇ ಮನೆಯವರ ಜೊತೆಗೆ ಕಾರಿನಲ್ಲಿ ಬಂದು ಮತಚಲಾಯಿಸಿ ಬಳಿಕ ಮದುವೆ ಮಂಟಪಕ್ಕೆ ತೆರಳಿದರು.
ಕಾಪು ವಿಧಾನಸಭಾ ಕ್ಷೇತ್ರದ ಕರಂದಾಡಿಯಲ್ಲಿ ವರ ರಿತೇಶ್ ಸನಿಲ್ ಮತದಾನ ಮಾಡಿದರು. ತಾಳಿ ಕಟ್ಟುವುದಕ್ಕೂ ಮೊದಲು ಮತದಾನ ಮಾಡುವುದು ಆದ್ಯ ಕರ್ತವ್ಯವೆಂದು ಭಾವಿಸಿ ಮನೆಯವರೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿ, ಬಳಿಕ ಹಸೆಮಣೆ ಏರಿದರು. ಈ ವೇಳೆ ಮದುಮಕ್ಕಳ ಜೊತೆ ಅವರ ತಂದೆ ತಾಯಿ, ಸಂಬಂಧಿಕರು ಆಗಮಿಸಿ ಹಕ್ಕು ಚಲಾಯಿಸಿದ್ದು, ಮದುವೆ ಮುಹೂರ್ತಕ್ಕೆ ತಡವಾಗದಂತೆ ಮತಗಟ್ಟೆ ಅಧಿಕಾರಿಗಳು ಈ ಮದುಮಕ್ಕಳಿಗೆ ಸಹಕರಿಸಿದರು.