ಮಡಿಕೇರಿ: ಬ್ರೇಕ್ ಫೇಲ್ ಆಗಿ ಶೆವರ್ಲೆಟ್ ಕಾರಿಗೆ ಡಿಕ್ಕಿ ಹೊಡೆದ ಕೆಎಸ್ಆರ್‌ಟಿಸಿ ಬಸ್ ತೋಟಕ್ಕೆ ನುಗ್ಗಿದ ಘಟನೆ ಮಡಿಕೇರಿ ಸಮೀಪ ನಡೆದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ-ಕುಶಾಲನಗರ ರಸ್ತೆಯ ಮಡಿಕೇರಿ ಸಮೀಪದ ಸಿಂಕೋನ ಸ್ಯಾಂಡಲ್ ಕಾಡಿನ ನಡುವೆ ಘಟನೆ ನಡೆದಿದ್ದು, ಎರಡು ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದನ್ನು ಹೊರತುಪಡಿಸಿ ಎಲ್ಲರೂ ಪಾರಾಗಿದ್ದಾರೆ.
ಕೆಎ-09-ಎಫ್-4770 ನೋಂದಣಿಯ ಕರ್ನಾಟಕ ಸಾರಿಗೆ ಬಸ್ ಮತ್ತು ಕೆಎ-51-ಸಿ-0995 ನೋಂದಣಿಯ ಕಾರು ಒಂದರ ಹಿಂದೆ ಒಂದರಂತೆ ಬರುತ್ತಿದ್ದವು. ಈ ವೇಳೆ ಕೆಎಸ್ಆರ್‌ಟಿಸಿ ಬಸ್ ಬ್ರೇಕ್‍ಫೇಲ್ ಆಗಿದ್ದು ಎಡಕ್ಕೆ ತಿರುಗಿ ಶೆವರ್ಲೆಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕ ಕೆಎಸ್ಆರ್‌ಟಿಸಿ ಬಸ್ 100 ಮೀಟರ್ ಕ್ರಮಿಸಿ ತೋಟಕ್ಕೆ ನುಗ್ಗಿದೆ.
ಕೆರೆಯ ಪಕ್ಕದಲ್ಲೇ ಬ್ರೇಕ್ ಫೇಲ್ ಆಗಿದ್ದು, ಕೆರೆಯನ್ನು ತಪ್ಪಿಸಿ ಬಸ್ ಚಲಾಯಿಸುವ ಮೂಲಕ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾನೆ. ಮಡಿಕೇರಿ ಡಿಪೋದ ಬಸ್ ಇದಾಗಿದ್ದು 10 ಜನ ಪ್ರಯಾಣಿಕರಿದ್ದರು. ಯಾರಿಗೂ ಗಂಭೀರ ಗಾಯಗಳಾಗಿಲ್ಲ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.