ಮುಂಬೈ: ಮಕ್ಕಳ ಜೀವವನ್ನು ಉಳಿಸಿ ಶಾಲಾ ವ್ಯಾನ್ ಚಾಲಕ ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ವಿರಾರ ನಗರದಲ್ಲಿ ನಡೆದಿದೆ.
ಖಾಸಗಿ ಶಾಲೆಯ ಪ್ರಕಾಶ್ ಪಾಟೀಲ್ (44) ಮಕ್ಕಳಿಗಾಗಿ ಪ್ರಾಣಾ ತ್ಯಾಗ ಮಾಡಿದ ಶಾಲಾ ವ್ಯಾನ್ ಚಾಲಕ.
Advertisement
ಘಟನೆ ವಿವರ:
ಪ್ರಕಾಶ್ ಪಾಟೀಲ್ ಸೋಮವಾರ ಮಧ್ಯಾಹ್ನ ಶಾಲೆಯಿಂದ ಮಕ್ಕಳನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ವಾಟರ್-ಲಾಗ್ಡ್ ಪಾಕೆಟ್ಸ್ ಮೂಲಕ ವಾಸೈಗೆ ಹೋಗುತ್ತಿದ್ದರು. ವಿರಾರದಲ್ಲಿರುವ ನೇರಿಂಗಿ ಗ್ರಾಮದ ಮೂಲಕ ವ್ಯಾನ್ ಚಲಿಸುತ್ತಿತ್ತು. ವ್ಯಾನ್ ಸಂಚರಿಸುತ್ತಿದ್ದ ಪಕ್ಕದಲ್ಲೇ ತೊರೆ ಹರಿಯುತ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.
Advertisement
ಅದಾಗಲೇ ವ್ಯಾನ್ ನಲ್ಲಿ ನಾಲ್ಕು ಮಕ್ಕಳು ಇದ್ದರು. ಕಹ್ರೋಡಿ ಜಂಕ್ಷನ್ ಹತ್ತಿರ ಬರುತ್ತಿದ್ದಂತೆಯೇ ಭಾರೀ ಮಳೆ ಆರಂಭವಾಗಿದೆ. ಹೀಗಾಗಿ ಚಾಲಕನಿಗೆ ರಸ್ತೆ ಕಾಣುತ್ತಿರಲಿಲ್ಲ. ಅಲ್ಲದೇ ಸುಮಾರು ಮೂರು ಅಡಿಯಷ್ಟು ನೀರು ರಸ್ತೆಯಲ್ಲೇ ಹರಿಯುತ್ತಿದ್ದರಿಂದ ಚಾಲಕನಿಗೆ ತೊರೆ, ರಸ್ತೆ ಕಾಣದೇ ಮುಂದೆ ಚಲಿಸಲು ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಭಾರೀ ಮಳೆಯಿಂದ ನೀರು ತುಂಬಿ ಹರಿಯುತ್ತಿದ್ದರಿಂದ ಅನಾಹುತ ಕಟ್ಟಿಟ್ಟಬುತ್ತಿ ಅಂತ ತಿಳಿದುಕೊಂಡು ಆತಂಕಗೊಂಡ ಚಾಲಕ ವ್ಯಾನ ನಿಲ್ಲಿಸಿದ್ದಾನೆ.
Advertisement
ಬಳಿಕ ಮಕ್ಕಳನ್ನು ವ್ಯಾನಿನಿಂದ ಇಳಿಯುವಂತೆ ಹೇಳಿದ್ದಾರೆ. ಅಲ್ಲದೇ ಮಕ್ಕಳನ್ನು ತಾವೇ ಸ್ವತಃ ವ್ಯಾನಿನಿಂದ ಇಳಿಸಿದ್ದಾರೆ. ಈ ವೇಳೆ ರಭಸವಾಗಿ ಹರಿಯುತ್ತಿರುವ ನೀರಿಗೆ ಸಿಲುಕಿ ಇಬ್ಬರು ಮಕ್ಕಳು ತೊರೆಗೆ ಬಿದ್ದಿದ್ದಾರೆ. ಕೂಡಲೇ ಚಾಲಕ ತೊರೆಗೆ ಹಾರಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಚಾಲಕ ತೊರೆಯ ಅಂಚಿನಲ್ಲಿದ್ದರಿಂದ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆಗ ಮಕ್ಕಳು ಸಹಾಯಕ್ಕಾಗಿ ಕಿರುಚಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ಸ್ಥಳೀಯರು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
ಮಾಹಿತಿ ತಿಳಿದು ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಚಾಲಕನಿಗಾಗಿ ಶೋಧಕಾರ್ಯ ಮಾಡಿದ್ದಾರೆ. ಈ ವೇಳೆ ಕೇವಲ 20 ನಿಮಿಷಗಳಲ್ಲಿ ಪಾಟೀಲ್ ದೇಹ ಸುಮಾರು 1.5 ಕಿ.ಮೀ. ದೂರ ಹೋಗಿದ್ದು, ಸದ್ಯ ಅವರ ಮೃತ ದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಟೀಲ್ ವಸೈದ ಪಾರೋಲ್ ಗ್ರಾಮದ ನಿವಾಸಿಯಾಗಿದ್ದು, ಎರಡು ವರ್ಷಗಳಿಂದ ವ್ಯಾನ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಈ ಕುರಿತು ತನಿಖೆ ಪೂರ್ಣಗೊಂಡ ನಂತರ, ಪಾಟೀಲ್ ಕುಟುಂಬಕ್ಕೆ ಪರಿಹಾರವನ್ನು ಶಿಫಾರಸ್ಸು ಮಾಡುತ್ತೇವೆ. ಈ ಘಟನೆ ಸಂಭವಿಸಿದ ನಂತರ ಪಾಟೀಲ್ ಅವರನ್ನು ಧೈರ್ಯಶಾಲಿ ಎಂದು ಗ್ರಾಮಸ್ಥರು ಪ್ರಶಂಸಿದ್ದಾರೆ ಎಂದು ವಿರಾರ್ ವಿಭಾಗದ ಉಪ ಸೂಪರಿಟೆಂಡೆಂಟ್ ಜಯಂತ್ ಬಾಜ್ಬೆಲೆ ಹೇಳಿದ್ದಾರೆ.
ನನ್ನ ಸಹೋದರ ಸಹಾಯ ಮನೋಭಾವವನ್ನು ಹೊಂದಿದ್ದರು. ಆತ ಮಕ್ಕಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಯಾರೊಂದಿಗೂ ಗಲಾಟೆ ಮಾಡಿಕೊಳ್ಳುತ್ತಿರಲಿಲ್ಲ. ಅಗತ್ಯವಿರುವರಿಗೆ ಕೈಲಾದ ಸಹಾಯ ಮಾಡುತ್ತಿದ್ದರು. ಆತ ತನ್ನ ಜೀವನದ ಬಗ್ಗೆ ಯೋಚಿಸಲಿಲ್ಲ ಎಂದು ಪಾಟೀಲ್ ಸಹೋದರ ಹೇಳಿದ್ದಾರೆ.