ಲಕ್ನೋ: ಪತಿ ಮೇಲೆ ಹಲ್ಲೆ ನಡೆಸುತ್ತಿದ್ದ ದುಷ್ಕರ್ಮಿಗಳ ಮೇಲೆ ಪತ್ನಿ ಗುಂಡು ಹಾರಿಸುವ ಮೂಲಕ ಪತಿಯ ಜೀವ ರಕ್ಷಣೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ನಗರದ ಸ್ಥಳೀಯ ನಿವಾಸಿ ಅಬಿದ್ ಅಲಿ ಎಂಬವರು ಭಾನುವಾರ ತಮ್ಮ ನಿವಾಸದ ಮುಂದೆ ನಿಂತಿದ್ದ ವೇಳೆ 6 ಮಂದಿ ದುಷ್ಕರ್ಮಿಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಮನೆ ಹೊರಗೆ ಪತಿ ಮೇಲೆ ಹಲ್ಲೆ ಮಾಡುತ್ತಿದ್ದನ್ನು ಕಂಡ ಪತ್ನಿ ರಿವಾಲ್ವರ್ ನಿಂದ ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿದ್ದಾರೆ.
ಪತ್ನಿ ಫೈರ್ ಮಾಡಿದ್ದನ್ನು ನೋಡಿ ಭಯಗೊಂಡ ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋಗಿದ್ದಾರೆ ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಕಾರಣ ಅಬಿದ್ ಅಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ವೃತ್ತಿಯಲ್ಲಿ ವಕೀಲರಾಗಿದ್ದು, ಪರವನಾಗಿ ಹೊಂದಿರುವ ಪಿಸ್ತೂಲ್ ಹೊಂದಿದ್ದರು.
ಘಟನೆ ವೇಳೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ದಂಪತಿಯನ್ನು ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು. ಆದರೆ ಈ ಪ್ರಕರಣ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಲಕ್ನೋದ ಕಕೋರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
https://www.youtube.com/watch?v=fPhSiI4KtwM