ಇಸ್ಲಾಮಾಬಾದ್: ಮಿದುಳು ತಿನ್ನುವ ಅಮೀಬಾ (ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್) ಸೋಂಕಿಗೆ ಪಾಕಿಸ್ತಾನದ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಆತಂಕ ಮೂಡಿಸಿದೆ. ಪಾಕಿಸ್ತಾನದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ.
ಮೃತನನ್ನು ಔರಂಗಜೇಬ್ ಎಂದು ಗುರುತಿಸಲಾಗಿದೆ. ಜು.7 ರಂದು ಕ್ವೈದಾಬಾದ್‌ನ ಫಾರ್ಮ್‌ಹೌಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಪಿಕ್ನಿಕ್ ಹೋಗಿದ್ದರು. ಈ ವೇಳೆ ಸ್ವಿಮ್ಮಿಂಗ್ ಕೂಡ ಮಾಡಿದ್ದರು. ಅದಾದ ಬಳಿಕ ಸೋಂಕಿಗೆ ತುತ್ತಾಗಿದ್ದಾರೆ. ಔರಂಗಜೇಬ್‌ಗೆ ಮೊದಲು ವಾಕರಿಕೆ ಮತ್ತು ಜ್ವರ ಕಾಣಿಸಿಕೊಂಡಿತ್ತು.
ಜು.10 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಜುಲೈ 11 ರಂದು ವೈರಸ್ ದೃಢಪಟ್ಟಿತು. ಚಿಕಿತ್ಸೆ ಫಲಿಸದೇ ಸೋಂಕಿಗೆ ಬಲಿಯಾಗಿದ್ದಾರೆ. ಇತರೆ ಎರಡು ಸಾವು ಪ್ರಕರಣಗಳು ಈ ಹಿಂದೆ ಕೋರಂಗಿ ಮತ್ತು ಮಲಿರ್‌ನಲ್ಲಿ ವರದಿಯಾಗಿದ್ದವು.
ಮುಕ್ತ ಜೀವಂತ ಅಮೀಬಾ ಹೊಂದಿರುವ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಅದು ಜನರಿಗೆ ಸೋಂಕು ತರುತ್ತದೆ. ಈಜುಕೊಳ, ನದಿ, ಸರೋವರಗಳಲ್ಲಿ ಈಜುವಾಗ ಸೋಂಕು ಉಂಟಾಗಬಹುದು. ಅಮೀಬಾ ಮೂಗಿನ ಮೆದುಳಿಗೆ ತಲುಪುತ್ತದೆ. ಅಲ್ಲಿ ಅದು ಮೆದುಳಿನ ಅಂಗಾಂಶವನ್ನು ಹಾನಿಗೊಳಿಸುತ್ತದೆ.
ರೋಗಲಕ್ಷಣಗಳು ಪ್ರಾರಂಭವಾದ ನಂತರ ರೋಗವು ವೇಗವಾಗಿ ಉಲ್ಬಣಗೊಳ್ಳುತ್ತದೆ. ಸಾಮಾನ್ಯವಾಗಿ ಐದು ದಿನಗಳಲ್ಲಿ ಸಾವಿಗೆ ಕಾರಣವಾಗುತ್ತದೆ.