ವಿಜಯಪುರ: ಶಾಲೆಗೆ ರಜೆ ಹಿನ್ನೆಲೆ ಗ್ರಾಮದ ಹೊರವಯದಲ್ಲಿರುವ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದದಲ್ಲಿ ನಡೆದಿದೆ.
ಐವರು ಬಾಲಕರ ಪೈಕಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಮತ್ತೋರ್ವ ಬಾಲಕನನ್ನು ರಕ್ಷಣೆ ಮಾಡಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದರಾಮಪ್ಪ ಬಿರಾದಾರ(11) ಅಮೀತ್ ಟಕ್ಕಳಕಿ(12) ಮೃತ ಬಾಲಕರು. ಮತ್ತೋರ್ವ ಬಾಲಕ ವೀರೇಶ್ ಟಕ್ಕಳಕಿಯನ್ನು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕುಮಾರಪ್ಪ ಕೋರಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆ ಕುರಿತು ತಿಳಿಯುತ್ತಿದ್ದಂತೆ ಮೃತ ಬಾಲಕರ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಜರಣ ದಾಖಲಾಗಿದೆ.