ನವದೆಹಲಿ: ಬರೋಬ್ಬರಿ 9 ವರ್ಷದ ಬಳಿಕ ಕಾಣೆಯಾಗಿದ್ದ ಮಗ ಪತ್ತೆಯಾಗಿದ್ದು, ಇದೀಗ ಮಗ ನನ್ನ ಕಣ್ಣ ಮುಂದೆ ನಿಂತಿದ್ದಾನೆ ಅನ್ನೋದನ್ನು ನಂಬಲು ಸಾಧ್ಯವಾಗುತ್ತಿಲ್ಲ ಅಂತ ತಂದೆ ಖುಷಿಯಲ್ಲಿ ಕಣ್ಣೀರು ಹಾಕಿದ್ದಾರೆ.
ದಕ್ಷಿಣ ದೆಹಲಿಯ ಛತ್ತಾರ್ ಪುರ್ ಪ್ರದೇಶದಿಂದ ಹಸನ್ ಆಲಿ ಎಂಬಾತ 2009ರ ಮಾರ್ಚ್ 2ರಿಂದ ಕಾಣೆಯಾಗಿದ್ದನು. ಇದೀಗ ಮಂಗಳವಾರ ಸಂಜೆ ಗುರುಗ್ರಾಮದಲ್ಲಿ ಪತ್ತೆಯಾಗಿದ್ದಾನೆ. ಮತ್ತೆ ಮನೆ ಸೇರುತ್ತಿರುವುದರಿಂದ ಆಲಿ ಕುಟುಂಬಸ್ಥರ ಸಂತಸ ಮುಗಿಲು ಮುಟ್ಟಿದೆ.
Advertisement
ಘಟನೆ ವಿವರ?:
ಹಸನ್ ಆಲಿ ತನ್ನ 6 ವರ್ಷದ ಬಾಲಕನಿದ್ದಾಗ ಕಾಣೆಯಾಗಿದ್ದ. ಆ ಬಳಿಕದಿಂದ ಆತ ಗುರುಗ್ರಾಮದಲ್ಲಿರುವ ಶಿಶು ಪಾಲನಾ ಸಂಸ್ಥೆಯಲ್ಲಿ ಬೆಳೆದಿದ್ದ. ಇದೇ ಜುಲೈ 22ರಂದು ಆಲಿ ಸಂಸ್ಥೆಯ 100 ಜನರೊಂದಿಗೆ ಪ್ರಯಾಣ ಬೆಳೆಸುತ್ತಿದ್ದನು. ಹೀಗೆ ಅಮ್ಯೂಸ್ ಮೆಂಟ್ ಪಾರ್ಕ್ ಬಳಿಯಿಂದಾಗಿ ಸೋನಿಪತ್ ಕಡೆ ಪ್ರಯಾಣಿಸುತ್ತಿದ್ದಾಗ ಆಲಿಗೆ ಅಚಾನಕ್ ಆಗಿ ಇದೇ ದಾರಿಯಲ್ಲಿ ತಾನು ಈ ಹಿಂದೆ ತನ್ನ ಪೋಷಕರೊಂದಿಗೆ ಹೋಗಿರುವ ಬಗ್ಗೆ ನೆನಪಾಗುತ್ತದೆ. ಕೂಡಲೇ ಶಿಶುಪಾಲನಾ ಸಂಸ್ಥೆಯ ಸಂಯೋಜಕ ಆಶಿಕ್ ಆಲಿ ಬಳಿ ಈ ವಿಚಾರ ಹೇಳಿಕೊಂಡಿದ್ದಾನೆ.
Advertisement
Advertisement
ಆಲಿ ಹೇಳಿದ ಕೂಡಲೇ ಆಶಿಕ್ ಆಲಿ ಆತನನ್ನು ಪೋಷಕರ ಬಳಿಗೆ ವಾಪಸ್ ಮಾಡುವ ನಿರ್ಧಾರ ಮಾಡುತ್ತಾರೆ. ಅಲ್ಲದೇ ಅವರು ಮತ್ತೆ ಛತ್ತರ್ ಪುರದತ್ತ ಹಿಂದಿರುಗುತ್ತಾರೆ. ಆಶಿಕ್ ಹಾಗೂ ಹಸನ್ ಆಲಿ ಛತ್ತರ್ ಪುರಕ್ಕೆ ಬಂದು ಸಾಕಷ್ಟು ಅಲೆದಾಡಿದ್ದಾರೆ. ಆದ್ರೆ ಅವರಿಗೆ ಆಲಿ ಪೋಷಕರ ಬಗ್ಗೆ ಮಾಹಿತಿ ಸಿಗಲಿಲ್ಲ. ಹೀಗಾಗಿ ತಿರುಗಾಡಿದ ಜಾಗದಲ್ಲೇ ಮತ್ತೆ ಮತ್ತೆ ಅವರು ಅಲೆದಾಡಿದ್ದಾರೆ.
Advertisement
ಛತ್ತರ್ ಪುರಕ್ಕೆ ಆಲಿ ಹಾಗೂ ಆಸಿಕ್ ಆಗಾಗ್ಗೆ ಬರುತ್ತಿದ್ದರು. ಆದ್ರೆ ಆಲಿ ಕುಟುಂಬ ದೆಹಲಿಯಿಂದ 60 ಕಿ.ಮೀ ದೂರದಲ್ಲಿರೋ ಧುರಹೇರಾ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂಬುದು ತಿಳಿದಿರಲಿಲ್ಲ. ಅಲೆದಾಡುತ್ತಿದ್ದ ಸಂದರ್ಭದಲ್ಲಿ ಸಣ್ಣ ಆಟದ ಮೈದಾನದಲ್ಲಿ ಕೆಲ ಮಕ್ಕಳು ಆಟವಾಡುತ್ತಿದ್ದರು. ಅದರಲ್ಲಿ ಮೊಹಮ್ಮದ್ ಶಂಶೀರ್ ಎಂಬಾತ ಆಶೀಕ್ ಹಾಗೂ ಅಲಿಯನ್ನು ಭೇಟಿಯಾಗಿದ್ದನು. ಶಂಶೀರ್, ಹಸನ್ ಆಲಿಯನ್ ನೋಡಿದ ಕೂಡಲೇ ಪತ್ತೆ ಹಚ್ಚಿ ಅಪ್ಪಿಕೊಂಡಿದ್ದಾನೆ. ಅಲ್ಲದೇ ತನ್ನ ಮೊಬೈಲ್ ತೆಗೆದು ಅದರಲ್ಲಿ ಹಸನ್ ಆಲಿಯ ಅಜ್ಜನ ಮೊಬೈಲ್ ನಂಬರ್ ಹುಡುಕಿ ಕರೆ ಮಾಡಿದ್ದಾನೆ. ನಂತರ ಹಸನ್ ಆಲಿಯನ್ನು ಆತನ ಅಜ್ಜನ ಬಳಿ ಶಂಶೀರ್ ಕಳುಹಿಸಿದ್ದಾನೆ. ಈ ಮೂಲಕ ಆಲಿ ಆತನ ಮನೆಗೆ ಹೋಗಲು ಸಾಧ್ಯವಾಯಿತು ಎಂಬುದಾಗಿ ವರದಿಯಾಗಿದೆ.
ಇತ್ತ ಅಜ್ಜನ ಮನೆಗೆ ತೆರಳಿದ ಹಸನ್ ಆಲಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾನೆ. ಯಾಕಂದ್ರೆ ಕುಟುಂಬದಲ್ಲಾದ ಜಗಳದಿಂದಾಗಿ ಹಸನ್ ಆಲಿಯ ಪೋಷಕರ ಮೊಬೈಲ್ ನಂಬರ್ ಅಜ್ಜನ ಬಳಿ ಇರಲಿಲ್ಲ. ಹಸನ್ ಆಲಿ ಹೀಗೆ ಚಿಂತೆಯಲ್ಲಿದ್ದಾಗ ಮರುದಿನ ಸಂಜೆ ಧುರಹೇರಾದಲ್ಲಿ ಸಂಬಂಧಿಕರೊಬ್ಬರು ಸಿಕ್ಕಿದ್ದಾರೆ. ಸಿಕ್ಕ ವ್ಯಕ್ತಿ ಆಲಿ ಪೋಷಕರ ಬಳಿ ಮಗ ಜೀವಂತವಾಗಿ ಇರುವ ಬಗ್ಗೆ ಹೇಳಿದ್ದಾರೆ.
ಮಗ ಸಿಕ್ಕಿದ ಸಂತೋಷದಿಂದ ತಂದೆ 40 ವರ್ಷದ ಸಲೀಂ ಮೊಹಮ್ಮದ್ ಕೂಡಲೇ ಹಸನ್ ಆಲಿ ಇದ್ದ ಜಾಗಕ್ಕೆ ಹುಡುಕಿಕೊಂಡು ಬಂದಿದ್ದಾರೆ. ಮಗನನ್ನು ನೋಡಿದ ಅವರು “ಇಂದು ನನ್ನ ಮಗ ತನ್ನೆದುರಿಗೆ ಇದ್ದಾನೆ ಎಂಬುದನ್ನು ನನ್ನ ಕಣ್ಣುಗಳಿಂದ ನಂಬಲು ಸಾಧ್ಯವಾಗುತ್ತಿಲ್ಲ ಅಂತ ಹೇಳಿ ಖುಷಿಯಿಂದ ಮಗನನನ್ನು ಬಿಗಿದಪ್ಪಿಕೊಂಡು ಕಣ್ಣೀರು ಸುರಿಸಿದ್ದಾರೆ. ಅಲ್ಲದೇ ನಾಳೆಯೇ ಶಿಶುಪಾಲನಾ ಸಂಸ್ಥೆಗೆ ತೆರಳಿ ಅಲ್ಲಿದ್ದ ಆತನ ದಾಖಲೆಗಳನ್ನು ತೆಗೆದುಕೊಂಡು ಬರುವುದಾಗಿ” ಮಗನಿಗೆ ತಿಳಿಸಿದರು.
ಆಲಿ ಮದರಸಾದಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಛತ್ತಾಪುರ್ ಆಟದ ಮೈದಾನದಿಂದಲೇ ನಾಪತ್ತೆಯಾಗಿದ್ದನು. ಸದ್ಯ ಆಲಿ ಖಾಸಗಿ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದು, ವಾರ್ಷಿಕ ಪರೀಕ್ಷೆಯ ಬಳಿಕ ಆತನ ಪೋಷಕರೊಂದಿಗೆ ಕಳುಹಿಸಿಕೊಂಡಲಾಗುವುದು ಅಂತ ಶಿಶುಪಾಲನಾ ಸಂಸ್ಥೆ ತಿಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv