ಬೆಂಗಳೂರು: ಕದ್ದ 17 ಕೆಜಿ ಚಿನ್ನವನ್ನು ಭೂಮಿಯಲ್ಲಿ ಹೂತಿಟ್ಟಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಕುಖ್ಯಾತ ಮನೆಗಳ್ಳ ಮುರಗನ್‍ನನ್ನು ಬಂಧಿಸುವಲ್ಲಿ ಬೊಮ್ಮನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ 5 ಕೋಟಿ ರೂ. ಮೌಲ್ಯದ 17 ಕೆ.ಜಿ. ಚಿನ್ನಭರಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಮುರಗನ್ ಮೂಲತಃ ತಮಿಳುನಾಡಿನವನಾಗಿದ್ದು, ತಮಿಳುನಾಡು, ತಿರುಚ್ಚಿ, ಆಂಧ್ರಪ್ರದೇಶ, ಬೆಂಗಳೂರಿನಲ್ಲಿ ಕಳ್ಳತನ ಮಾಡಿದ್ದ. ಮೂರು ರಾಜ್ಯಗಳ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಇದೀಗ ಅಂತಿಮವಾಗಿ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈತ ಅಂತರಾಜ್ಯ ಕಳ್ಳನಾಗಿದ್ದರಿಂದ ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಟ್ಟಿದ್ದರು. ಅಲ್ಲದೆ ಕದ್ದಿದ್ದ ಎಲ್ಲ ಚಿನ್ನಾಭರಣವನ್ನು ಆಲೂಗಡ್ಡೆಯಂತೆ ತಿರಚ್ಚಿಯ ಕಾಡಿನಲ್ಲಿ ಭೂಮಿಯನ್ನು ಅಗೆದು ಹೂತಿಟ್ಟಿದ್ದ. ವಿಚಾರಣೆ ವೇಳೆ ಈ ಕುರಿತು ಬಾಯ್ಬಿಟ್ಟಿದ್ದು, ಪೊಲೀಸರು ಆತನನ್ನು ಚಿನ್ನಾಭರಣವಿರುವ ಸ್ಥಳಕ್ಕೆ ಕರೆದೊಯ್ದು ಆರೋಪಿಯಿಂದ ಎಲ್ಲ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.