ಪತ್ರಿಕೆಗಳಲ್ಲಿ ಬರುತ್ತಿದ್ದ ಶ್ರೀದೇವಿ ಫೋಟೋಗಳನ್ನ ಕಟ್ ಮಾಡಿ ಆಲ್ಬಂ ಮಾಡ್ತಿದ್ದೆ: ಸುಧಾರಾಣಿ

Public TV
1 Min Read
sridevi sudharani

ಬೆಂಗಳೂರು: 80ರ ದಶಕದ ಖ್ಯಾತ ನಟಿ ದಕ್ಷಿಣ ಮತ್ತು ಉತ್ತರ ಭಾರತದ ಚಿತ್ರರಂಗದಲ್ಲಿ ತನ್ನದೇ ಅಭಿಮಾನಿಗಳ ಬಳಗವನ್ನ ಹೊಂದಿರುವ ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ.

ದುಬೈನಲ್ಲಿ ತನ್ನ ಸಂಬಂಧಿಕರ ಮದುವೆಗೆಂದು ಹೊಗಿದ್ದ ಅವರು, ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶ್ರೀದೇವಿ ನಿಧನಕ್ಕೆ ಇಡೀ ಚಿತ್ರರಂಗವೇ ಮರುಗಿದ್ದು, ಚಿತ್ರರಂಗದ ಗಣ್ಯರೆಲ್ಲ ಸಂತಾಪ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ನಟಿ ಸುಧಾರಾಣಿ ಮಾತನಾಡಿ ಶ್ರೀದೇವಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ನಿಜವಾಗ್ಲೂ ನನಗೆ ಶ್ರೀದೇವಿಯವರು ನಮ್ಮೊಂದಿಗೆ ಇಲ್ಲ ಎನ್ನುವುದು ನಂಬೋಕೆ ಆಗುತ್ತಿಲ್ಲ. ಪ್ರಪಂಚದಲ್ಲಿ ಶ್ರೀದೇವಿ ಅವರನ್ನ ಇಷ್ಟ ಪಡದ ವ್ಯಕ್ತಿನೇ ಇಲ್ಲ. ಆ ಸಾಲಿಗೆ ನಾನೂ ಕೂಡ ಸೇರುತ್ತೇನೆ. ಆ ಕಾಲದಲ್ಲಿ ಅವರೇ ನನ್ನ ಸ್ಫೂರ್ತಿಯಾಗಿದ್ದರು. ಅವರಂದ್ರೇ ನನಗೆ ಹುಚ್ಚು. ಕಾಲೇಜು ಸಮಯದಲ್ಲಿ ಅವರ ಬಗ್ಗೆ ಪತ್ರಿಕೆಗಳಲ್ಲಿ ಬರುತ್ತಿದ್ದ ಫೋಟೊಗಳನ್ನ ಕಟ್ ಮಾಡಿ ನನ್ನ ಬುಕ್ ನಲ್ಲಿ ಅಂಟಿಸಿಕೊಳ್ಳುತ್ತಿದ್ದೆ” ಎಂದು ನೆನಪು ಮಾಡಿಕೊಂಡರು.

“ಅವರು ನಟಿಸಿದ `ಜಗದೇಕ ವೀರುಡು ಅತಿಲೋಕ ಸುಂದರಿ’ ಚಿತ್ರವನ್ನು ಅದೇಷ್ಟು ಸಲ ನೋಡಿದ್ದೇನೋ, ಬಾಲಿವುಡ್‍ನ ಇಂಗ್ಲೀಷ್ ವಿಂಗ್ಲೀಷ್ ಚಿತ್ರವನ್ನು ಸಹ ತುಂಬಾ ಸಲ ನೋಡಿದ್ದೀನಿ. ಅವರ ನಟನೆ ಬಗ್ಗೆ ಹೇಳಲಸಾಧ್ಯ. ಅವರ ಅಭಿನಯ, ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು. ಒಟ್ಟಾರೆಯಾಗಿ ಹೇಳೋದಾದರೇ ಅಂತಾ ನಟಿಯನ್ನ ಕಳೆದುಕೊಂಡ ನಮ್ಮ ಚಿತ್ರರಂಗ ಈಗ ಬರಿದಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀದೇವಿ ತಮ್ಮ ಮಗಳಾದ ಜಾನ್ವಿ ಕಪೂರ್, ಖುಷಿ ಕಪೂರ್ ಮತ್ತು ಪತಿ ಬೋನಿ ಕಪೂರ್ ಅವರನ್ನ ಅಗಲಿದ್ದಾರೆ. ಜಾನ್ವಿ ಕಪೂರ್ ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಮಗಳು ಚಿತ್ರರಂಗದಲ್ಲಿ ಬೆಳೆಯುವುದನ್ನ ನೋಡಬೇಕೆಂಬ ಆಸೆಯಲ್ಲಿದ್ದ ಶ್ರೀದೇವಿ ತಮ್ಮ ಜೀವನದ ಪಯಣವನ್ನು ಮುಗಿಸಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.  ಇದನ್ನೂ ಓದಿ: ಅಮಿತಾಬ್ ಬಚ್ಚನ್‍ಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತಾ?- ಬಿಗ್ ಬಿ ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಶ್ರೀದೇವಿ ಸಾವು

https://youtu.be/7-t7NbVkcJQ

Share This Article
Leave a Comment

Leave a Reply

Your email address will not be published. Required fields are marked *