ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ಮಾನ್ವಿತಾ ಕಾಮತ್, ಬಾಲಿವುಡ್ ನಟ ಸೋನು ಸೂದ್ ಅವರಿಗೆ ಧನ್ಯವಾದಗಳನ್ನು ತಿಳಿಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ತಾಯಿಯ ಚಿಕಿತ್ಸೆಗಾಗಿ ಸೋನು ನೆರವಾಗಿದ್ದನ್ನು ಅವರು ನೆನದಿದ್ದಾರೆ. ನನ್ನ ಕುಟುಂಬದ ಪಾಲಿನ ರಿಯಲ್ ಹೀರೋ ನೀವು ಎಂದು ಸೋನು ಸೂದ್ ಅವರನ್ನು ಗುಣಗಾನ ಮಾಡಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಮಾನ್ವಿತಾ ಅವರ ತಾಯಿಗೆ ಕಿಡ್ನಿ ಸಮಸ್ಯೆ ಆಗಿತ್ತು. ಚಿಕಿತ್ಸೆಗಾಗಿ ಒಳ್ಳೆಯ ವೈದ್ಯರನ್ನು ಸಲಹೆ ನೀಡಿ ಎಂದು ಅವರು ಪೋಸ್ಟ್ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ್ದ ಮಂಗಳೂರಿನ ಸೋನು ಸೂದ್ ಟ್ರಸ್ಟ್, ಮಾನ್ವಿತಾ ಅವರನ್ನು ಸಂಪರ್ಕಿಸಿತ್ತು. ತಾಯಿಯ ಚಿಕಿತ್ಸೆಗೆ ಅಗತ್ಯವಿರುವ ನೆರವನ್ನು ನೀಡುವುದಾಗಿ ಫೌಂಡೇಷನ್ ತಿಳಿಸಿತ್ತು. ತಾನು ಕೊಟ್ಟ ಮಾತಿನಂತೆ ನೆರವಾಗಿದೆ. ಹಾಗಾಗಿಯೇ ಮಾನ್ವಿತಾ ಅವರು ಸೋನು ಅವರನ್ನು ನೆನೆದಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ
ಮಾನ್ವಿತಾ ಅವರ ತಾಯಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಅಲ್ಲದೇ, ಅವರಿಗೆ ಕಿಡ್ನಿ ಕಸಿಯನ್ನೂ ಮಾಡಿಸಬೇಕಿದೆಯಂತೆ. ಈ ಚಿಕಿತ್ಸೆಗೆ ಅಗತ್ಯ ಇರುವ ನೆರವನ್ನೂ ಸೋನು ಸೂದ್ ನೀಡುವುದಾಗಿ ಆಸ್ಪತ್ರೆಗೆ ತಿಳಿಸಿದ್ದಾರಂತೆ. ಆದಷ್ಟು ಬೇಗ ಮಾನ್ವಿತಾ ತಾಯಿಯ ಆರೋಗ್ಯ ಸುಧಾರಿಸಲಿ ಎಂದು ಅವರೂ ಹಾರೈಸಿದ್ದಾರಂತೆ.
ಕೆಂಡಸಂಪಿಗೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಮಾನ್ವಿತಾ, ಆನಂತರ ಅನೇಕ ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾದರು. ಈ ವಾರ ಮಾನ್ವಿತಾ ನಟನೆಯ ಶಿವ 143 ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಿದ್ದಾರಂತೆ. ಅಲ್ಲದೇ, ಮತ್ತಷ್ಟು ಚಿತ್ರಗಳಿಗೂ ಅವರು ಸಹಿ ಮಾಡಿದ್ದಾರಂತೆ.