ಉಡುಪಿ: ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ಬೋಟ್ ಸಮುದ್ರಕ್ಕೆ ಮಗುಚಿ ದುರಂತವೇ ಸಂಭವಿಸಿದೆ. ಅವಘಡದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಉಡುಪಿಯ (Udupi) ಡೆಲ್ಟಾ ಬೀಚ್ ಕೋಡಿಬೆಂಗ್ರೆಯಲ್ಲಿ ನಡೆದಿದೆ.
ಮೃತರನ್ನು ಶಂಕರಪ್ಪ( 22) ಹಾಗೂ ಸಿಂಧು (23) ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಉಡುಪಿಯ ಸಮುದ್ರ ವಿಹಾರಕ್ಕೆ ಬಂದಿದ್ದ 28 ಜನರ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಜೀವನ್ಮರಣ ಹೋರಾಟದಲ್ಲಿದ್ದಾರೆ. ಇದನ್ನೂ ಓದಿ: ಅಲೆಗಳ ಅಬ್ಬರಕ್ಕೆ ಮಗುಚಿದ ಬೋಟ್ – 15 ಮಂದಿ ಪ್ರವಾಸಿಗರ ರಕ್ಷಣೆ, ನಾಲ್ವರ ಸ್ಥಿತಿ ಗಂಭೀರ
ಉಡುಪಿಯ ಡೆಲ್ಟಾ ಬೀಚ್‌ಗೆ ಮೈಸೂರಿನ ಬಿಪಿಒ ಕಾಲ್ ಸೆಂಟರ್‌ವೊಂದರ 28 ಮಂದಿ ಪ್ರವಾಸಿಗರ ತಂಡ ಬಂದಿತ್ತು. ಎರಡು ಪ್ರವಾಸಿ ಬೋಟುಗಳಲ್ಲಿ 28 ಮಂದಿ ಕಡಲಿಗೆ ಇಳಿದಿದ್ದರು. ಎಲ್ಲ ಪ್ರವಾಸಿಗರಿಗೂ ಭದ್ರತೆಯ ದೃಷ್ಟಿಯಿಂದ ಲೈಫ್ ಜಾಕೆಟ್ ನೀಡಲಾಗಿತ್ತು. ಈ ಪೈಕಿ ಹಲವರು ಜಾಕೆಟ್ ಧರಿಸಿದರೆ ಇನ್ನು ಕೆಲವರು, ನೆಗ್ಲೆಟ್ ಮಾಡಿ ಹಾಗೇನೇ ಬೋಟ್ ಹತ್ತಿದ್ದರು. ಕಡಲಿನಲ್ಲಿ ಬೋಟ್ ಸಾಗುತ್ತಿದ್ದಂತೆ ಕೆಲ ಪ್ರವಾಸಿಗರು ಹುಚ್ಚಾಟ ಮಾಡಿ, ಬೋಟ್‌ನಲ್ಲಿ ಕುಣಿಯಲು ಆರಂಭಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಬೋಟು ಮಗಚಿ ಬಿತ್ತು. ಕೂಡಲೇ ಸ್ಥಳೀಯರು ಇನ್ನೊಂದು ಬೋಟಿನ ಮೂಲಕ ಸ್ಥಳಕ್ಕೆ ತೆರಳಿ ನೀರಿನಲ್ಲಿ ಮುಳುಗಿದವರನ್ನು ಮೇಲಕ್ಕೆತ್ತಿದ್ದರು. ಹಲವು ಮಂದಿ ಲೈಫ್ ಜಾಕೆಟ್ ಧರಿಸಿದ್ದರಿಂದ ಸುಲಭವಾಗಿ ಮತ್ತೊಂದು ಬೋಟ್‌ಗೆ ಶಿಫ್ಟ್ ಮಾಡಲಾಯಿತು. ಗಂಭೀರವಾಗಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.
ಈ ಪ್ರಕರಣದಲ್ಲಿ ಪ್ರವಾಸಿಗರ ನಿರ್ಲಕ್ಷದಿಂದಲೇ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಸ್ವಸ್ಥಗೊಂಡವರಿಗೆ ಮಲ್ಪೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ಗೋಕರ್ಣ | ಸಮುದ್ರಕ್ಕಿಳಿದು ಅಲೆಗೆ ಸಿಲುಕಿದ ಮೂರು ಜನ ಪ್ರವಾಸಿಗರ ರಕ್ಷಣೆ

