ಹಠಾತ್ ಪ್ರವಾಹ (Flood).. ಇದ್ದಕ್ಕಿದ್ದಂತೆ ಬತ್ತಿ ಹೋಗುವ ನದಿಗಳು (River), ಜಲ ಮೂಲಗಳು.. ಸಮುದ್ರದ ಉತ್ಪನ್ನಗಳನ್ನೇ ನಂಬಿ ಬದುಕುತ್ತಿರುವ ಜನ.. ಸಮುದ್ರ ಜೀವಿಗಳಿಗೆ ಎದುರಾಗುತ್ತಿರುವ ಅಪಾಯ.. ಹೀಗೆ ತೀವ್ರಗೊಳ್ಳುತ್ತಿರುವ ಹವಾಮಾನ ವೈಪರಿತ್ಯದಿಂದ ಜಲ ಮೂಲಗಳಿಗೆ ಹಾಗೂ ಜನರಿಗೆ ಎದುರಾಗುತ್ತಿರುವ ಅಪಾಯಗಳ ಬಗ್ಗೆ ಈ ಬಾರಿ ದಾವೂಸ್ ಸಮಾವೇಶದಲ್ಲಿ ಚರ್ಚಿಸಲಾಗಿದೆ. ‘ಬ್ಲೂ ದಾವೋಸ್’ (Blue Davos) ಎಂಬ ಶೀರ್ಷಿಕೆಯಲ್ಲಿ ನಡೆದ ಈ ಚರ್ಚೆ, ತೀವ್ರಗೊಳ್ಳುತ್ತಿರುವ ಹವಾಮಾನ ವೈಪರೀತ್ಯ ಎದುರಿಸಲು ಅಗತ್ಯವಾಗಿದೆ. ಏನಿದು ‘ಬ್ಲೂ ದಾವೋಸ್’ ಇದರ ಆಳ – ಅಗಲದ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಬ್ಲೂ ದಾವೋಸ್ ಎಂದರೇನು?
ಈ ವರ್ಷದ WEF (Davos World Economic Forum) ಸಭೆಯಲ್ಲಿ ನೀರಿನ ವ್ಯವಸ್ಥೆಗಳ ಮೇಲೆ ವಿಶೇಷ ಗಮನ ಹರಿಸುವುದನ್ನು ಬ್ಲೂ ದಾವೋಸ್ ಸೂಚಿಸುತ್ತದೆ. ಸಾಗರಗಳು, ಸಿಹಿನೀರಿನ ಸಂಪನ್ಮೂಲಗಳು ಮತ್ತು ಮೀನುಗಾರಿಕೆ, ಜಲ ಆಹಾರ ವ್ಯವಸ್ಥೆಗಳು ಮತ್ತು ನೀರು-ಅವಲಂಬಿತ ಕೈಗಾರಿಕೆಗಳನ್ನು ಒಳಗೊಂಡಿರುವ ವಿಶಾಲವಾದ ನೀಲಿ ಆರ್ಥಿಕತೆಯನ್ನು ಇದು ವ್ಯಾಪಿಸಿದೆ.
ಈ ಬಗ್ಗೆ ಉನ್ನತ ಮಟ್ಟದ ಅಧಿವೇಶನಗಳು, ಸಂವಾದ ನಡೆಸಿ ಹೊಸ ಉಪಕ್ರಮಗಳ ಮೂಲಕ, ಹವಾಮಾನ ವೈಪರಿತ್ಯ ತಡೆಗೆ ಕ್ರಮ, ಆಹಾರ ಭದ್ರತೆ, ವ್ಯಾಪಾರ ಮಾರ್ಗಗಳು, ಜನರ ಜೀವನಕ್ಕೆ ಬಳಕೆಯಾಗುವ ನೀರಿನ ಮರು ಪರಿಶೀಲನೆಗೆ ಚಿಂತಿಸಲಾಗಿದೆ.
ತಾಪಮಾನ ಹೆಚ್ಚಳದಿಂದ ಬರ & ಪ್ರವಾಹ
ಅಕ್ಟೋಬರ್ 2024 ರಲ್ಲಿ ಅಮೆಜಾನ್ ಜಲಾನಯನ ಪ್ರದೇಶದ ನದಿಗಳು ಐತಿಹಾಸಿಕ ಕಡಿಮೆ ಮಟ್ಟಕ್ಕೆ ಇಳಿದಿದ್ದವು. ಸ್ಪೇನ್ ಏಕಕಾಲದಲ್ಲಿ ಮೂರು ದಶಕಗಳ ಕಾಲ ಪ್ರವಾಹವನ್ನು ಎದುರಿಸಿತು. ಕಳೆದ ವರ್ಷ ಈ ಪ್ರದೇಶಗಳಲ್ಲಿ ಸಹ ಪ್ರವಾಹ ಮರುಕಳಿಸಿತ್ತು. ತಾಪಮಾನವು ಬರ ಮತ್ತು ಪ್ರವಾಹ ಎರಡನ್ನೂ ಹೇಗೆ ತೀವ್ರಗೊಳಿಸುತ್ತಿದೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಪ್ರಕಾರ, ತಾಪಮಾನ ಹೆಚ್ಚಳದಿಂದ ಪ್ರಭಾವಿತವಾಗಿರುವ ಭೂಪ್ರದೇಶವು 1900 ರಿಂದ ಈಚೆಗೆ ಎರಡು ಪಟ್ಟು ಹೆಚ್ಚಾಗಿದೆ. ಇದರಿಂದ ಕುಡಿಯುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರೊಂದಿಗೆ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ.
1980ರ ದಶಕದಿಂದ ಸಾಗರ ತಾಪಮಾನ ಏರಿಕೆಯ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ. ಇದು ಹಿಮ ಕರಗಿ ಸಮುದ್ರ ಮಟ್ಟ ಏರಿಕೆ ಮತ್ತು ಸಾಗರ ಆಮ್ಲೀಕರಣದಂತಹ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಇದರೊಂದಿಗೆ ಮಾಲಿನ್ಯವು ಅನೇಕ ನೀರಿನ ಮೂಲಗಳನ್ನು ಅಸುರಕ್ಷಿತಗೊಳಿಸುತ್ತಿದೆ. ಇದರ ಪರಿಣಾಮವಾಗಿ, ಜಾಗತಿಕ ಜಲ ಪರಿಸರ ವ್ಯವಸ್ಥೆಯು ಹೆಚ್ಚು ಸಮತೋಲನವನ್ನು ಕಳೆದುಕೊಳ್ಳುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಜಲ ಪರಿಸರ ವ್ಯವಸ್ಥೆ ಆರ್ಥಿಕ ಮೌಲ್ಯ
ಜಲ ಪರಿಸರ ವ್ಯವಸ್ಥೆಗಳ ವಾರ್ಷಿಕ ಆರ್ಥಿಕ ಮೌಲ್ಯವನ್ನು 58 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಆರ್ಥಿಕತೆಯ ಕೇಂದ್ರ ವಿಷಯವಾಗಿದೆ. ಪ್ರಸ್ತುತ ನೀರಿನಲ್ಲಿ ಜಾಗತಿಕ ಹೂಡಿಕೆಯ ಕೇವಲ 2–3% ಮಾತ್ರ ಖಾಸಗಿ ವಲಯದಿಂದ ಬರುತ್ತಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಇದು ಹೊಸ ಹೂಡಿಕೆ, ಹಂಚಿಕೆ ಹಾಗೂ ಮರು ಮೌಲ್ಯೀಕರಣಕ್ಕೆ ಗಮನಹರಿಸಲು ಒತ್ತು ನೀಡುತ್ತದೆ.

ನೀಲಿ ಆರ್ಥಿಕತೆಯಲ್ಲಿ ಸಾಹಸೋದ್ಯಮ ಬಂಡವಾಳ ನಿಧಿಯು ಕಳೆದ ಎಂಟು ವರ್ಷಗಳಲ್ಲಿ ಏಳು ಪಟ್ಟು ಹೆಚ್ಚಾಗಿದೆ. ಆಹಾರ ಭದ್ರತೆ ಮತ್ತು ಜೀವವೈವಿಧ್ಯತೆ ಸೇರಿದಂತೆ ಜಲ ಪರಿಸರ ವ್ಯವಸ್ಥೆಗಳನ್ನು ರಕ್ಷಿಸದೇ ಈ ಹೂಡಿಕೆ ಮಾತ್ರ ಮಾಡಿದರೆ ಸಾಕಾಗುವುದಿಲ್ಲ ಎಂಬ ಆತಂಕವೂ ಇದೆ. 3 ಶತಕೋಟಿಗೂ ಹೆಚ್ಚು ಜನರಲ್ಲಿ ಕನಿಷ್ಠ 20% ರಷ್ಟು ಪೋಷಕಾಂಶಗಳನ್ನು ಸಮುದ್ರ ಆಹಾರಗಳಿಂದ ಪಡೆಯುತ್ತಾರೆ. ಈ ವಲಯವು ಜಾಗತಿಕವಾಗಿ ಕೋಟ್ಯಂತರ ಜನರಿಗೆ ಉದ್ಯೋಗ ಒದಗಿಸಿದೆ. ಜಲಚಕ್ರ ಅಸಮತೋಲನ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆರ್ಥಿಕತೆ ದುರ್ಬಲಗೊಳಿಸಲಿದೆ. 2050 ರ ವೇಳೆಗೆ ನೀಲಿ ಆಹಾರಗಳ ಬೇಡಿಕೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಆ ಸಮಯದಲ್ಲಿ ಪೂರೈಸುವ ಸಾಮರ್ಥ್ಯದ ಪ್ರಶ್ನೆ ಸಹ ಎದ್ದಿದೆ.
ನೀರಿನ ವರ್ಷ
ಮೇಲೆ ವಿವರಿಸಲಾದ ವಿಚಾರಗಳ ತುರ್ತು ಸ್ಥಿತಿಯಿಂದಾಗಿ WEF 2026ನ್ನು ‘ನೀರಿನ ವರ್ಷ’ ಎಂದು ಘೋಷಿಸಿದೆ. ಡಿಸೆಂಬರ್ 2 ರಿಂದ 4 ರವರೆಗೆ ಯುಎಇಯಲ್ಲಿ ನಡೆಯಲಿರುವ ಮೂರನೇ ವಿಶ್ವಸಂಸ್ಥೆಯ ಜಲ ಸಮ್ಮೇಳನದೊಂದಿಗೆ ಇದು ಮುಕ್ತಾಯಗೊಳ್ಳಲಿದೆ. ಸುಮಾರು 50 ವರ್ಷಗಳಲ್ಲಿ ಇದು ಕೇವಲ ಮೂರನೇ ಸಮ್ಮೇಳನವಾಗಿದೆ.

