ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಕಾರ್ಯಕಾರಣಿ ಸಭೆ ಮಾಡಲು ಸರ್ವ ಸದಸ್ಯರು ಗೋವಾ (Goa) ಟ್ರಿಪ್ ಮಾಡಿದ್ದರು. ರಾತ್ರಿ ಹೋಟೆಲ್ ನಲ್ಲಿ ಮೋಜು ಮಸ್ತಿ ಮಾಡುವಾಗ ನಿರ್ಮಾಪಕರ ಮಧ್ಯ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಇಬ್ಬರು ನಿರ್ಮಾಪಕರು ತೀವ್ರ ಗಾಯಗೊಂಡಿದ್ದಾರೆ. ಇವರು ಗೋವಾಗೆ ಹೋಗಿದ್ದು ಕನ್ನಡ ಚಿತ್ರೋದ್ಯಮದ ಉದ್ದಾರಕ್ಕೆ. ಸಿನಿ ರಂಗವನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸೋಕೆ. ಹೋದವರ‍್ಯಾರು ಕಾಂಜಿಪಿಂಜಿಗಳಲ್ಲ. ಪುಡಿರೌಡಿಗಳೂ ಅಲ್ಲವೇ ಅಲ್ಲ. ಕನ್ನಡ ಸಿನಿರಂಗಕ್ಕೆ ಅಪರೂಪದ ಸಿನಿಮಾ ಕೊಟ್ಟವರು. ಸ್ಯಾಂಡಲ್‌ವುಡ್ಡನ್ನು ಹುಲುಸಾಗಿ ಬೆಳೆಸಿದವರು. ಗಟ್ಟಿಯಾಗಿ ನಿಲ್ಲಿಸಿದವರು. ಆದ್ರೆ, ಈ ಗುಂಪಿನಲ್ಲಿದ್ದ ಕೆಲವರು ಮಾಡಿದ್ದೇನು? ಎಣ್ಣೆ ಏಟಲ್ಲಿ ಬಡಿದಾಡ್ಕೊಂಡಿದ್ದಾರೆ. ಕನ್ನಡ ಚಿತ್ರೋದ್ಯಮದ ಮಾನ ಮರ‍್ಯಾದೇನ ಮೂರುಕಾಸಿಗೆ ಹರಾಜಾಕಿದ್ದಾರೆ. ಬಡಿದಾಡ್ಕೊಂಡವ್ರ ಮುಖದಿಂದ ರಕ್ತ ಸೋರಿದೆ, ತಲೆಬುರುಡೆ ಒಡೆದಿದೆ. ಮಾರಣಾಂತಿಕ ಹಲ್ಲೆ ನಡೆದಿದೆ.
Advertisement
ಕನ್ನಡ ಸಿನಿಮಾ ರಂಗಕ್ಕೀಗ ಬರೋಬ್ಬರಿ 90 ವರ್ಷ. ಈ ಹಾದಿ ಸುಗಮವಾದುದಲ್ಲ. ಮದ್ರಾಸ್‌ನಿಂದ ಬಿಡಿಸಿಕೊಂಡು ಕರ್ನಾಟಕದಲ್ಲೇ ಚಿತ್ರರಂಗ ಕಟ್ಟಿದ ಇತಿಹಾಸವಿದೆಯಲ್ಲ ಅದು ರೋಚಕ. `ಮದ್ರಾಸ್’ ಎಂಬ ನಮ್ಮದಲ್ಲದ ನೆಲದಲ್ಲಿ ನೆಲೆನಿಂತು, ಕಷ್ಟಪಟ್ಟು, ಅವರು ಕೊಟ್ಟ ಸಮಯಕ್ಕೆ ಚಿತ್ರೀಕರಣ ಮಾಡಿ, ಹಗಲು ರಾತ್ರಿ ಲೆಕ್ಕಿಸದೇ ಕಟ್ಟಿದ ಚಿತ್ರರಂಗ ನಮ್ಮದು. ನಾವೀಗ 90ರ ಸಂಭ್ರಮದಲ್ಲಿದ್ದೇವೆ. ಇಡೀ ರಾಷ್ಟ್ರವೇ ಕನ್ನಡ ಸಿನಿಮಾ ರಂಗದತ್ತ ನೋಡುವಂತಾಗಿದೆ. ಮೂಕಿ ಯುಗದಿಂದ ಇಲ್ಲೀತನಕ ಮಾಡಿದ ಪ್ರಯೋಗಗಳು ಇತರ ಚಿತ್ರರಂಗಕ್ಕೆ ಮಾದರಿ ಆಗಿವೆ. ಈ ಮಾದರಿ ಇವರಿಂದಾಗಿ ಮಣ್ಣುಪಾಲಾಗಿದೆ. 90ರ ಸಂಭ್ರಮವನ್ನು ಸೆಲೆಬ್ರೇಟ್ ಮಾಡೋದು ಹೇಗೆ? ಅಂತ ಪ್ಲ್ಯಾನ್ ಮಾಡೋಕೆ ಹೋದವರು ಮಾನ ಕಳೆದು ಬಂದಿದ್ದಾರೆ.
Advertisement
Advertisement
ಚಿತ್ರರಂಗದ ಮಾತೃಸಂಸ್ಥೆ ಈ ಫಿಲ್ಮ್ ಚೇಂಬರ್. ಚಿತ್ರೋದ್ಯಮದ ಪುಣ್ಯಾತ್ಮರು ನಡೆದಾಡಿದ ಕರ್ಮಭೂಮಿ ಅದು. ಅದಕ್ಕೆ ಅದರದ್ದೇ ಆದ ಗೌರವವಿದೆ. ಈಗದು ತನ್ನ ಖದರ್ ಕಳೆದುಕೊಳ್ಳುತ್ತಿದ್ದರೂ, ಈಗಲೂ ಈ ಸಂಸ್ಥೆಯ ಮೇಲೆ ಅಪಾರ ವಿಶ್ವಾಸ, ನಂಬಿಕೆ ಚಿತ್ರಕರ್ಮಿಗಳದ್ದು. ಇಂಥದ್ದೊಂದು ಜವಾಬ್ದಾರಿಯ ಅರಿವು ಈಗಿರುವವರಿಗೆ ಇರಬೇಕಿತ್ತು ಅಲ್ಲವಾ?.. ಗೋವಾಗೆ ಹೋಗಿದ್ದು ಯಾಕೆ? ಅಲ್ಲಿಗೇ ಯಾಕೆ ಹೋಗಬೇಕಿತ್ತು? ಅಷ್ಟೂ ಜನರನ್ನು ಕರೆದುಕೊಂಡು ಹೋಗಿದ್ದು ಯಾರು? ಹಣ ಎಲ್ಲಿಂದ ಬಂತು? ಈ ಯಾವ ಪ್ರಶ್ನೆಯನ್ನೂ ಜನರು ಕೇಳ್ತಿಲ್ಲ.. ಗೋವಾಗೆ ಹೋಗಿದ್ದು ತಪ್ಪು ಅಂತಾನೂ ಹೇಳ್ತಿಲ್ಲ. ಮಾತೃಸಂಸ್ಥೆಯ ಹೆಸರಿನಲ್ಲಿ ಹೋದರು ಮರ್ಯಾದೆ ಕಳೆಯುವಂಥ ಕೆಲಸ ಮಾಡ್ಬೋದಾ ಅಂತಿದ್ದಾರೆ ಜನರು. ಗೋವಾಗೆ ಹೋದವರೇ ಹೇಳ್ತಿರೋ ಪ್ರಕಾರ.. ಇವರೆಲ್ಲ ಹೋಗಿದ್ದು ಜಾಲಿಟ್ರಿಪ್‌ಗೆ ಅಲ್ಲವಂತೆ. ಸಿನಿಮಾ ರಂಗಕ್ಕೆ 90 ವರ್ಷ ತುಂಬಿರೋ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗ್ತಿದೆ. ಈ ಕಾರ್ಯಕ್ರಮದ ರೂಪರೇಷೆ ಚರ್ಚೆ ಮಾಡೋಕೆ ಗೋವಾಗೆ ಹೋಗಿದ್ದರಂತೆ. ಇದರ ಜೊತೆಗೆ ಫಿಲ್ಮ್ ಚೇಂಬರ್‌ನ ಕಾರ್ಯಕಾರಿಣಿ ಸಭೆ ಕೂಡ ಪ್ಲ್ಯಾನ್ ಆಗಿತ್ತಂತೆ. ಇಷ್ಟೊಂದು ಮಹತ್ವದ ಕೆಲಸ ಇಟ್ಕೊಂಡು ಹೋದವರು ಬಡಿದಾಡಿಕೊಂಡಿದ್ದು ಯಾಕೆ?.. ಉಳಿದುಕೊಂಡ ಹೋಟೆಲ್‌ನಲ್ಲಿ ನೆತ್ತರು ಹರಿಸಿದ್ದು ಯಾಕೆ?.. ಅಷ್ಟಕ್ಕೂ ಇವರೇನು ಸಣ್ಣ ಮಕ್ಕಳಾ? ಫಿಲ್ಮ್ ಚೇಂಬರ್ ಸದಸ್ಯರಾಗಿದ್ದವರಿಗೆ ಕಾಮನ್‌ಸೆನ್ಸ್ ಬೇಡವಾ?.
Advertisement
ಫಿಲ್ಮ್ ಚೇಂಬರ್‌ನಲ್ಲಿ ಈ ರೀತಿ ಗಲಾಟೆ ಆಗೋದು ಹೊಸದೇನೂ ಅಲ್ಲ. ಚುನಾವಣೆ ಟೈಮ್‌ನಲ್ಲಿ ಒಬ್ಬರಿಗೊಬ್ಬರು ತೊಡೆ ತಟ್ಟಿದ್ದಾರೆ.. ಕೂಗಾಡಿದ್ದಾರೆ.. ಕೈಕೈ ಮಿಲಾಯಿಸೋ ಹಂತಕ್ಕೂ ಹೋಗಿದ್ದಾರೆ. ಆದರೆ, ಈ ಪ್ರಮಾಣದಲ್ಲಿ ಯಾವತ್ತೂ ಜಗಳ ಆಗಿರಲಿಲ್ಲ. ಹಾಗಂತ ಈಗ ಯಾವ ಚುನಾವಣೆನೂ ನಡೆದಿಲ್ಲ. ಗೋವಾದಲ್ಲಿ ನಡೆದಿರೋ ಮಾರಣಾಂತಿಕ ಹಲ್ಲೇಲಿ ನಿರ್ಮಾಪಕ ಎ.ಗಣೇಶ್ ಹಣೆಯಿಂದ ರಕ್ತ ಚಿಮ್ಮಿದೆ. ದೇಹದ ತುಂಬಾ ಗಾಯಗಳಾಗಿವೆ. ಮತ್ತೋರ್ವ ನಿರ್ಮಾಪಕ ರಥಾವರ ಚಂದ್ರು ಕೂಡ ಗಂಭೀರ ಗಾಯದಿಂದ ನೆರಳ್ತಾ ಇದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಸೂಕ್ತ ಸಮಯದಲ್ಲಿ ಅಂಬುಲೆನ್ಸ್ ಬಾರದೇ ಇದ್ದರೆ, ಅನಾಹುತಾನೇ ಆಗಿರೋದು ಅಂತಿದ್ದಾರೆ ನಿರ್ಮಾಪಕ ಗಣೇಶ್.
ಅಂಬುಲೆನ್ಸ್ ತಡವಾಗಿದ್ದರೆ ಅನಾಹುತನೇ ಆಗಿರೋದು ಅಂತಿದ್ದಾರೆ ಅಂದ್ಮೇಲೆ.. ಹಲ್ಲೆ ಯಾವ ಪ್ರಮಾಣದಲ್ಲಿ ಆಗಿರೋದು ಅಂತ ನೀವೇ ಅಂದಾಜಿಸಿಕೊಳ್ಳಿ.. ಅಷ್ಟಕ್ಕೂ ಈ ಗಲಾಟೆ ನಡೆದಿದ್ದು ಯಾಕೆ? ವೈಯಕ್ತಿಕ ಕಾರಣ ಏನಾದ್ರೂ ಇತ್ತಾ? ದ್ವೇಷ ತುಂಬಿಕೊಂಡೆ ಇವರು ಗೋವಾಗೆ ಹೋಗಿದ್ದಾರೆ? ದ್ವೇಷದಲ್ಲಿ ಹಲ್ಲು ಮಸೀತಾ ಇದ್ದೋರ್‌ನ ಗೋವಾಗೆ ಕರ‍್ಕೊಂಡು ಹೋಗಿದ್ದು ಯಾರು? ಸತೀಶ್ ಅನ್ನೋರು ಫೋರ್ಕ್ ಸ್ಪೂನ್‌ನಿಂದ ಹಲ್ಲೆ ಮಾಡಿದ್ದು ಯಾಕೆ? ಅಲ್ಲಿದ್ದವರಿಗೆ ಈ ಕಾಳಗವನ್ನು ತಪ್ಪಿಸೋಕೆ ಆಗ್‌ಲಿಲ್ಲವಾ? ಅಬ್ಬಬ್ಬಾ.. ಎಷ್ಟೊಂದು ಪ್ರಶ್ನೆಗಳು.. ಇದಕ್ಕೆ ಉತ್ತರಿಸೋರು ಯಾರು? ನಿರ್ಮಾಪಕ ಗಣೇಶ್ ಅವರೇ ಹೇಳಿದಂತೆ ಹಲ್ಲೆ ಮಾಡಿದ ವ್ಯಕ್ತಿ ಕಂಠಪೂರ್ತಿ ಕುಡಿದಿದ್ನಂತೆ.. ಅದು ಬರೀ ಕುಡಿತದ ಹಾರಾಟ ಮಾತ್ರ ಆಗಿರಲಿಲ್ಲವಂತೆ.. `ಬೇರೆ ಇನ್ನೇನಾದ್ರೂ ತಗೊಂಡಿದ್ನಾ?.’ ಅಂತ ಅನುಮಾನ ಹೊರ ಹಾಕಿದ್ದಾರೆ. `ಬೇರೆದು ಅಂದ್ರೇನು..?’ ಈ ಮಾತು ನಾನಾ ಅನುಮಾನಕ್ಕೆ ಕಾರಣವಾಗಿದೆ. `ಬೇರೆದು ಅಂದ್ರೇನು..?’ ಅಂತ ಗಣೇಶ್ ಅವರೇ ಬಿಡಿಸಿ ಹೇಳಬೇಕಿದೆ. ಒಟ್ನಲ್ಲಿ.. ಗೋವಾ ಟ್ರಿಪ್ ಸುಖಾಂತ್ಯ ಕಾಣದೆ.. ಹೊಡೆದಾಟದಲ್ಲಿ ಕೊನೆಗೊಂಡಿದೆ. ಹೋದ ಕೆಲ್ಸ ಆಯ್ತಾ ಅಂತ ಚೇಂಬರ್ ಅಧ್ಯಕ್ಷರೇ ಹೇಳ್ಬೇಕಿದೆ. ಅಂದಹಾಗೆ ಈ ಘಟನೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್ ತುಟಿಗೂ ಗಾಯ ಆಗಿದೆ ಅನ್ನೋದು ವಿಪರ್ಯಾಸ.