ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪೊಲೀಸರನ್ನು ಗುರಿಯಾಗಿಕೊಂಡು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಿಸಿ 4 ಪೊಲೀಸರನ್ನು ಹತ್ಯೆ ಮಾಡಲಾಗಿದೆ.
ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನ ಚೋಟಾ ಬಜಾರ್ ಹಾಗೂ ಬಡ ಬಜಾರ್ ಪ್ರದೇಶದ ಅಂಗಡಿಯೊಂದರ ಬಳಿ ಉಗ್ರರು ರಿಮೋಟ್ ಕಾಂಟ್ರೋಲ್ ಉಳ್ಳ ಐಇಡಿ ಯನ್ನು ಅಳವಡಿಸಿದ್ದರು. ಪೊಲೀಸರು ಗಸ್ತಿನಲ್ಲಿದ್ದ ವೇಳೆ ಈ ಸ್ಥಳಕ್ಕೆ ಬಂದಾಗ ಐಇಡಿ ಯನ್ನು ಸ್ಫೋಟಿಸಲಾಗಿದೆ. ಸ್ಫೋಟದಿಂದ 3 ಅಂಗಡಿಗಳಿಗೂ ಕೂಡ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಈವರೆಗೆ ಯಾವುದೇ ಉಗ್ರಗಾಮಿ ಸಂಘಟನೆಗಳು ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ವಿಚಾರ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
1993 ರಲ್ಲಿ ಭದ್ರತಾಪಡೆಯ ಗುಂಡಿನ ದಾಳಿಯಿಂದ 57 ಮಂದಿ ಸಾವನ್ನಪ್ಪಿದ್ದ ಸಾಮೂಹಿಕ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಶನಿವಾರ ಕಾಶ್ಮೀರದ ಪ್ರತ್ಯೇಕತಾವಾದಿಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಹೀಗಾಗಿ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಮಾರ್ಕೆಟ್‍ನಲ್ಲಿನ ಅಂಗಡಿಗಳು ಬಂದ್ ಆಗಿದ್ದವು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಇರಲಿಲ್ಲ.
Advertisement
ಘಟನೆ ಕುರಿತು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದು, ಐಇಡಿ ಸ್ಫೋಟದಿಂದ ನಾಲ್ವರು ಪೊಲೀಸರು ಸಾವನ್ನಪ್ಪಿರುವ ವಿಷಯ ಕೇಳಿ ನೋವಾಗಿದೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.