ದಾವಣಗೆರೆ: ಎಷ್ಟೋ ಜನಕ್ಕೆ ಇರೋಕೆ ಮನೆ ಇಲ್ಲದೇ, ಚಳಿಯಿಂದ ತಪ್ಪಿಸಿಕೊಳ್ಳಲು ಬೆಚ್ಚನೆ ಹೊದಿಕೆ ಇಲ್ಲದೇ ಬೀದಿ ಬದಿಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇಂತಹ ನಿರಾಶ್ರಿತರಿಗೆ ದಾವಣಗೆರೆಯ ಜನ ಬೆಚ್ಚನೆಯ ಹೊದಿಕೆಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ನಗರದ ಇನ್ನರ್ ವೀಲ್ ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಭಿಕ್ಷುಕರಿಗೆ ಮೆತ್ತನೆಯ ಹೊದಿಕೆ ನೀಡಿ ಮಾನವೀಯತೆ ಮೆರೆದಿದಿದ್ದಾರೆ. ದಾವಣಗೆರೆಯಲ್ಲಿ ಇತ್ತೀಚಿಗೆ ಚಳಿ ಜಾಸ್ತಿಯಾಗಿದ್ದು, ಭಿಕ್ಷುಕರು ಸರಿಯಾಗಿ ಹೊದಿಕೆ ಇಲ್ಲದೇ ಪ್ರತಿನಿತ್ಯ ಚಳಿಯಲ್ಲಿ ನರಕ ಯಾತನೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಇನ್ನರ್ ವೀಲ್, ರೋಟರಿ ಸಂಸ್ಥೆಯ ಸದಸ್ಯರು ಹೊದಿಕೆ ನೀಡಿದ್ದಾರೆ.
ಸಂಸ್ಥೆಯ ಸದಸ್ಯರು ದಾವಣಗೆರೆ ವಿವಿಧ ಕಡೆ ಸಂಚರಿಸಿ ಚಳಿಯಲ್ಲಿ ನಡುಗುತ್ತಿದ್ದ ಭಿಕ್ಷುಕರಿಗೆ ಬ್ಲಾಂಕೇಟ್ ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ನೂರಾರು ಜನ ಭಿಕ್ಷುಕರಿಗೆ ಸಂಸ್ಥೆಯ ಸದಸ್ಯರು ಹೊದಿಕೆ ನೀಡಿದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.